ಗುರುವಾರ, ಸೆಪ್ಟೆಂಬರ್ 1, 2011

ಇರುಳ - ಬೆಳಕಿನ ಸೊಲ್ಲು



ಹಗಲೆಂದರೆ ಬೆಳಕು
ಇರುಳೆಂದರೆ ಕತ್ತಲು
ಹೆಚ್ಚೇನಿಲ್ಲ
ಕುರುಡರ ಪಾಠಕ್ಕೆ
ಒಂದೇ ಸಾಲು ....!

ಲೋಕದ ಪಟ್ಯದಲಿ
ಇನ್ನೂ
ನೋವು , ಬಡತನ
ಜಾತಿ -ಮತದ ಪದಗಳು
ಹೇರಳವಾಗಿ ಕಾಣುತ್ತಿವೆ ; ಈ ದಿನವಾದರೂ
ಬೆಳಗಾಯಿತೆಂದು
ಹೇಗೆ ಹೇಳಲಿ ....?

ಹಗಲ ಕಣ್ಣಿಂದ
ಇರುಳ ನೋಡುವುದ
ನಿಲ್ಲಿಸಿದೆ ;
ಈಗ
ಇರುಳು
ಬರೀ ಕತ್ತಲೆಂದು
ಹೇಳುವುದು ನನ್ನಿಂದಾಗದು ...!

ನಿನಗೂ ಮಿತಿಯಿದೆ
ನನಗೂ ಮಿತಿಯಿದೆ ಮಿತಿಯ ಬದುಕಿನ ಬಗ್ಗೆ
ಅಸಮಾಧಾನದ ದೀಪ
ಬೆಳಗಾಗುವ ತನಕ
ಉರಿಯಲಿ ಬಿಡು
ಈ ಕ್ಷಣ ನನಗೆ
ನೆನಪಿನಲ್ಲಿ ಉಳಿದಿರುವುದಿಷ್ಟೇ
ಮಿತಿಗಳಿಲ್ಲದ್ದು
ಮಾನವೀಯವಾಗಿಯೂ ಇರಲ್ಲ ...!

ಬೆಳಕ ಬಲ್ಲವ
ಇರುಳಾಯಿತು ಎನ್ನಲಾರ
ಇರುಳ ಬಲ್ಲವ
ಬೆಳಕಾಯಿತು ಎನ್ನಲಾರ
ಇರುಳು ಬೆಳಕಿನ ಬೀಜ
ಬೆಳಕು ಇರುಳಿನ ಬೀಜ
ಹೊರ ಪದರಷ್ಟೇ
ಕಪ್ಪು -ಬಿಳಿ ಬಣ್ಣ
ಎಂಬುದು
ನೀನು ಇಲ್ಲದಿದ್ದಾಗಷ್ಟೇ
ಅರಿವಿಗೆ ಬರುವುದು ...!

ಬೆಳಗಾಯಿತು
ನಿಜ ;
ಬರೀ ಕತ್ತಲೆಯಲ್ಲ
ಕನಸೂ
ಹಾಸುಗೆಯಿಂದ
ಎದ್ದು ನಡೆಯಿತು ..


ಬೆಳಗು
ಕತ್ತಲು ಇಲ್ಲದಿರುವುದಕ್ಕೊಂದು
ಹೆಸರು ..;
ನೆನಪಿಡು
ಬೆಳಕಿನಲ್ಲಿ
ಕನ್ನಡಿ ಇದ್ದರಷ್ಟೇ
ನಿನಗೆ ನಿನ್ನ
ಮುಖ ಕಾಣುವುದು ..!

ರಾತ್ರಿ ಬರೆದ
ಸಾವಿನ ಕವನ
ಮುಂದುವರಿಸಿದೆ
ಸುಮ್ಮನೆ
ಹಗಲು -ರಾತ್ರಿ ತದ್ವಿರುದ್ದ
ಅಂದವರಾರು ...!

ಇರುಳು
ಕಣ್ಣಿಲ್ಲದವನ ಕೈಯಲ್ಲಿ
ಕಂದೀಲಿದ್ದರೂ
ಕಣ್ಣಿದ್ದವನು ಪ್ರಪಾತದ
ಪಾಲಾಗುವುದು ತಪ್ಪುವುದು ...!
೧೦
ಬೆಳಗಾದ ಮೇಲೂ
ಆರಿ ಹೋಗದ
ಹಣತೆಯ ಹಾಗೆ ನೀನು
ನನ್ನ ಬೆಳಕಿನ ಲೋಕದ
ಕತ್ತಲೆ ಕಳೆಯಲು
ಉರಿಯುತ್ತಲೇ ಇದ್ದಿ ..!
೧೧
ಇನ್ನೂ
ಉಳಿದೇ ಇತ್ತು
ಬೆಳಕಿನ ಹಂಬಲ
ಇರುಳಿಗೆ ಮಾತು ಕೊಟ್ಟವರು
ಉಳಿಯುವದಾದರೂ ಹೇಗೆ
ನನ್ನ ಬಳಿ ..
೧೨
ಸೂರ್ಯ ಬರುತ್ತಿರುವ ಹಾಗೆ
ಎಲ್ಲ ದೀಪಗಳು
ಆರುವವು ಎಂದಲ್ಲ ..
ಸೂರ್ಯನ ಬೆಳಕು
ಎಷ್ಟಿದ್ದರೂ
ಸಾಲದಾಯಿತೇನೋ
ಸ್ಮಶಾನದ ದೀಪ
ಆರದೇ ಉಳಿಯುವುದು ...!
-ಅನಾಮಿಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ