ಸೋಮವಾರ, ಅಕ್ಟೋಬರ್ 31, 2011

ದ್ವಿಪದಿಗಳು




ಈ ವರ್ಷವೂ ಅಷ್ಟೇ ವಸಂತನ ಸಮ್ಮುಖದಲ್ಲಿ
ಹೊಸ ಚಿಗುರಿನಿಂದ ಕಂಗೊಳಿಸುವ ಮರ ಹಳೆಯದಾಗುವುದು


ನಿನ್ನೆ ರಾತ್ರಿ ಹಣತೆ ಹಚ್ಚಿಟ್ಟು ಮಲಗಿದೆವು
ಎದ್ದಾಗ ಎವೆಗಳ ಮೇಲೆ ಬರೀ ಕಾಡಿಗೆ ಕಪ್ಪು


ಮನೆ ಬಾಗಿಲಲಿ ನೂರೆಂಟು ಹಣತೆ ಹಚ್ಚಿಟ್ಟ ಮೇಲಾದರೂ ನಿನಗೆ ನೆನಪಾಗಲಿಲ್ಲ
ಅಖಂಡ ಭೂಮಿಗೆ ಸೂರ್ಯನೊಬ್ಬನೆ ಎಂಬುದ ನೀನು ನೋಡಿಯೂ ಕಲಿಯಲಿಲ್ಲ


ಕೊಂಡವರ ಮನೆಯ ಜಗುಲಿಯೇರಿ ಹಣತೆ ಬೆಳಕಾಯಿತು
ಹಣತೆ ಮಾರುವ ಕುಂಬಾರನ ಬದುಕು ಇನ್ನೂ ಬೀದಿ ಬದಿಗಿತ್ತು


ಸೂರ್ಯನನ್ನು ಕಂಡ ಕೂಡಲೇ
ಭೂಮಿಯ ಕಪ್ಪು ಚರಿತ್ರೆ ಬಣ್ಣ ಬದಲಿಸಿತು



ಬೆಳಗಾಯಿತೆಂದು ನಾವು ಸಂಭ್ರಮ ಪಟ್ಟೆವು
ಇಂದೂ ಸಾವು ಒಂದಡಿ ಹೆಜ್ಜೆ ಮುಂದೆಬಂದಿತು



ಬೀದಿ ಬಾಗಿಲು ಬಾಯಿ ಬಿಟ್ಟಿತು ಬೆಳಗಾಯಿತೆಂದು
ಕೆಲವು ಸುಂದರ ಕನಸುಗಳ ಕೊಲೆ ನೆಡದೆ ಹೋಯಿತು



ಬುದ್ದನ ಅನುಯಾಯಿಯಾಗುವದಾದರೆ ಹಣತೆ ಹಚ್ಚು
ಬುದ್ದನಾಗುವದಾದರೆ ಉರಿವ ಹಣತೆಯ ತೈಲವಾಗು


ಈಗಲೂ ಅಷ್ಟೇ ಊರ ಜನ ಸತ್ತ ಸುದ್ದಿ ಬಂದರೆ
ಹಲಿಗೆ ಬಾರಿಸುವನ ಆಶ್ರಯ ಮನೆಯಲಿ ಹೊಗೆ ಕಾಣುವುದು
೧೦

ನನ್ನ ಕೈಯಿಂದೇನು ? ಇಳಿಹೊತ್ತು
ಸೂರ್ಯನ ಕೈಯಿಂದಲೂ ಭೂಮಿ ಕೈತಪ್ಪಿತು

೧೧
ಕೇರಿ ಉರಿದು ಹೊಗುವುದ ನಿಂತು ನೋಡುವ ಊರಿನ ಮೂಗಿಗೆ
ಉರಿಯಲಿ ಬೆಂದ ಆಕಳಿನ ಮಾಂಸದ ವಾಸನೆಯಷ್ಟೇ ಕಿರಿಕಿರಿ
೧೨

ನಮ್ಮ ಕೇರಿಗೂ ಬೆಳಕು ಬೇಕೆಂದು ಹಠ ಹಿಡಿದ ಹುಡುಗರ ಕನಸು ಬಿತ್ತು
ಎಚ್ಚರಾದಾಗ ರಾತ್ರಿಯೇ ಉರಿದುಹೋದ ಕೇರಿಯ ಬೂದಿ ಮೂಗಿಗಡುರುತ್ತಿತ್ತು
೧೩

ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ
೧೪

ಅನಪೇಕ್ಷಿತ ಇಚ್ಚೆಗಳ ಆಸ್ತಿ ದೊಡ್ಡದಿತ್ತು
ಹಾದಿಯುದ್ಧಕ್ಕೂ ಸಾಗಿ ಬಂತು ಬದುಕಿನ ಬಡತನ
೧೫
ಈಜುವದಕೇನು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
ನೂರಾರು ಗಾವುದ ದೂರದಲಿರುವ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು ...
೧೬
ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರೀ ಅಕ್ಷರಗಳನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು ..!
೧೭
ನೀವು ಹರ್ಷದಿಂದ ಹೂಮಾಲೆ ತಂದಾಗ ನಾ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ನಾ ತಲೆಯೆತ್ತುವುದಾದರೂ ಹೇಗೆ ?
೧೮
ಈ ರಾತ್ರಿ ಸಾಲು ಸಾಲು ಹಣತೆ ಹಚ್ಚಿ ಹುಡುಕಿದರೇನು ?
ಕತ್ತಲಲಿ ಬೆಳಕಿನ ಸ್ವಿಚ್ಚು ಎಲ್ಲಿದೆಯೆಂದು ಭೂಮಿಗಷ್ಟೇ ಗೊತ್ತು
೧೯
ಆ ಕವಿ ಒಂದು ಜನಾಂಗದ ಕಣ್ಣು ತೆರೆಯಿಸಿದರೆಂಬ ಮಾತಿಗೇಕೆ ಕೋಪ
ಕವಿ ಕೊಟ್ಟ ಕಣ್ಣು ಆ ಕವಿ ತೋರಿದ ದಾರಿಗಷ್ಟೇ ದೀಪ
೨೦
ಲೋಕದ ತುಂಬ ಬೆಳಕು ಬೀದಿಗೆ ಬಂದಿತು
ಹಬ್ಬದ ದಿನ ಮನೆಯೊಳಗಿನ ಕತ್ತಲು ತಣ್ಣಗಿತ್ತು    

ಗುರುವಾರ, ಅಕ್ಟೋಬರ್ 27, 2011

ದೀಪಾವಳಿ – ಕೆಲ ಪದ್ಯಗಳು



-ಲಡಾಯಿ ಬಸು


ಹಣತೆ ಸುಟ್ಟುಕೊಳ್ಳುವಾಗ
ಲೋಕಕ್ಕೆ
ಬೆಳಕಿನ ಸಂಭ್ರಮ ..!

ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ  ..!

ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು
ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..!

ಇಡೀ ಇರುಳು
ಪ್ರೇಮಿಸಿದ ಫಲವೆನ್ನುವ ಹಾಗೆ
ಕತ್ತಲು ಬೆಳಕಾಗಿ ಮಾರ್ಪಟ್ಟಿತು
ಹೆಚ್ಚೇನಿಲ್ಲ
ಪ್ರೇಮಿಸುವದೆಂದರೆ
ಕತ್ತಲನ್ನು ಬೆಳಕಾಗಿಸುವುದು
ಇದು ಇರುಳಿನ
ನೀತಿಪಾಠವಂತೂ ಅಲ್ಲ ..!

ಸೂರ್ಯನಿರುವ ಹಗಲಿನಲ್ಲಿ
ಹಣತೆ ಹಚ್ಚುವ
ನಿನ್ನ  ಸಂಭ್ರಮಕೆ ಏನನ್ನಲಿ ?
ಉರಿವ ಹಣತೆ
ಹೇಳುವುದು ಇದನ್ನೇ
ಸುಡದೆ ಬೆಳಕಾಗಲು
ಬರದು ..!


ತನ್ನಷ್ಟಕ್ಕೆ ತಾನು
ಉರಿದು ಬೆಳಕಾದ
ಸೂರ್ಯನ ಪಾಠ ಓದಲಾಗದ
ಕುರುಡರು
ಈ ದಿನ ಹಣತೆ ಹಚ್ಚಿ
ಕತ್ತಲೆ ಕಳೆಯಲೆಂದು
ಪ್ರಾರ್ಥನೆಗೆ ಕುಳಿತರು
ಒಂದು ಕರುಣೆಯ ನೋಟ
ಬಿಟ್ಟರೆ
ಅವರ ನಡೆ
ನನ್ನ ಶಬ್ದಗಳಿಗೆ ನಿಲುಕದು
ಎಲ್ಲ ದಾಖಲೆ ಮುರಿದಿದೆ
ಕುರುಡರ ಲೋಕದಲ್ಲಿ
ಕನ್ನಡಿಯ ಮಾರಾಟ
-ಚಿತ್ರಕೃಪೆ- ಅಂತರ್ಜಾಲ