ಸೋಮವಾರ, ಅಕ್ಟೋಬರ್ 31, 2011

ದ್ವಿಪದಿಗಳು
ಈ ವರ್ಷವೂ ಅಷ್ಟೇ ವಸಂತನ ಸಮ್ಮುಖದಲ್ಲಿ
ಹೊಸ ಚಿಗುರಿನಿಂದ ಕಂಗೊಳಿಸುವ ಮರ ಹಳೆಯದಾಗುವುದು


ನಿನ್ನೆ ರಾತ್ರಿ ಹಣತೆ ಹಚ್ಚಿಟ್ಟು ಮಲಗಿದೆವು
ಎದ್ದಾಗ ಎವೆಗಳ ಮೇಲೆ ಬರೀ ಕಾಡಿಗೆ ಕಪ್ಪು


ಮನೆ ಬಾಗಿಲಲಿ ನೂರೆಂಟು ಹಣತೆ ಹಚ್ಚಿಟ್ಟ ಮೇಲಾದರೂ ನಿನಗೆ ನೆನಪಾಗಲಿಲ್ಲ
ಅಖಂಡ ಭೂಮಿಗೆ ಸೂರ್ಯನೊಬ್ಬನೆ ಎಂಬುದ ನೀನು ನೋಡಿಯೂ ಕಲಿಯಲಿಲ್ಲ


ಕೊಂಡವರ ಮನೆಯ ಜಗುಲಿಯೇರಿ ಹಣತೆ ಬೆಳಕಾಯಿತು
ಹಣತೆ ಮಾರುವ ಕುಂಬಾರನ ಬದುಕು ಇನ್ನೂ ಬೀದಿ ಬದಿಗಿತ್ತು


ಸೂರ್ಯನನ್ನು ಕಂಡ ಕೂಡಲೇ
ಭೂಮಿಯ ಕಪ್ಪು ಚರಿತ್ರೆ ಬಣ್ಣ ಬದಲಿಸಿತುಬೆಳಗಾಯಿತೆಂದು ನಾವು ಸಂಭ್ರಮ ಪಟ್ಟೆವು
ಇಂದೂ ಸಾವು ಒಂದಡಿ ಹೆಜ್ಜೆ ಮುಂದೆಬಂದಿತುಬೀದಿ ಬಾಗಿಲು ಬಾಯಿ ಬಿಟ್ಟಿತು ಬೆಳಗಾಯಿತೆಂದು
ಕೆಲವು ಸುಂದರ ಕನಸುಗಳ ಕೊಲೆ ನೆಡದೆ ಹೋಯಿತುಬುದ್ದನ ಅನುಯಾಯಿಯಾಗುವದಾದರೆ ಹಣತೆ ಹಚ್ಚು
ಬುದ್ದನಾಗುವದಾದರೆ ಉರಿವ ಹಣತೆಯ ತೈಲವಾಗು


ಈಗಲೂ ಅಷ್ಟೇ ಊರ ಜನ ಸತ್ತ ಸುದ್ದಿ ಬಂದರೆ
ಹಲಿಗೆ ಬಾರಿಸುವನ ಆಶ್ರಯ ಮನೆಯಲಿ ಹೊಗೆ ಕಾಣುವುದು
೧೦

ನನ್ನ ಕೈಯಿಂದೇನು ? ಇಳಿಹೊತ್ತು
ಸೂರ್ಯನ ಕೈಯಿಂದಲೂ ಭೂಮಿ ಕೈತಪ್ಪಿತು

೧೧
ಕೇರಿ ಉರಿದು ಹೊಗುವುದ ನಿಂತು ನೋಡುವ ಊರಿನ ಮೂಗಿಗೆ
ಉರಿಯಲಿ ಬೆಂದ ಆಕಳಿನ ಮಾಂಸದ ವಾಸನೆಯಷ್ಟೇ ಕಿರಿಕಿರಿ
೧೨

ನಮ್ಮ ಕೇರಿಗೂ ಬೆಳಕು ಬೇಕೆಂದು ಹಠ ಹಿಡಿದ ಹುಡುಗರ ಕನಸು ಬಿತ್ತು
ಎಚ್ಚರಾದಾಗ ರಾತ್ರಿಯೇ ಉರಿದುಹೋದ ಕೇರಿಯ ಬೂದಿ ಮೂಗಿಗಡುರುತ್ತಿತ್ತು
೧೩

ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ
೧೪

ಅನಪೇಕ್ಷಿತ ಇಚ್ಚೆಗಳ ಆಸ್ತಿ ದೊಡ್ಡದಿತ್ತು
ಹಾದಿಯುದ್ಧಕ್ಕೂ ಸಾಗಿ ಬಂತು ಬದುಕಿನ ಬಡತನ
೧೫
ಈಜುವದಕೇನು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
ನೂರಾರು ಗಾವುದ ದೂರದಲಿರುವ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು ...
೧೬
ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರೀ ಅಕ್ಷರಗಳನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು ..!
೧೭
ನೀವು ಹರ್ಷದಿಂದ ಹೂಮಾಲೆ ತಂದಾಗ ನಾ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ನಾ ತಲೆಯೆತ್ತುವುದಾದರೂ ಹೇಗೆ ?
೧೮
ಈ ರಾತ್ರಿ ಸಾಲು ಸಾಲು ಹಣತೆ ಹಚ್ಚಿ ಹುಡುಕಿದರೇನು ?
ಕತ್ತಲಲಿ ಬೆಳಕಿನ ಸ್ವಿಚ್ಚು ಎಲ್ಲಿದೆಯೆಂದು ಭೂಮಿಗಷ್ಟೇ ಗೊತ್ತು
೧೯
ಆ ಕವಿ ಒಂದು ಜನಾಂಗದ ಕಣ್ಣು ತೆರೆಯಿಸಿದರೆಂಬ ಮಾತಿಗೇಕೆ ಕೋಪ
ಕವಿ ಕೊಟ್ಟ ಕಣ್ಣು ಆ ಕವಿ ತೋರಿದ ದಾರಿಗಷ್ಟೇ ದೀಪ
೨೦
ಲೋಕದ ತುಂಬ ಬೆಳಕು ಬೀದಿಗೆ ಬಂದಿತು
ಹಬ್ಬದ ದಿನ ಮನೆಯೊಳಗಿನ ಕತ್ತಲು ತಣ್ಣಗಿತ್ತು    

ಗುರುವಾರ, ಅಕ್ಟೋಬರ್ 27, 2011

ದೀಪಾವಳಿ – ಕೆಲ ಪದ್ಯಗಳು-ಲಡಾಯಿ ಬಸು


ಹಣತೆ ಸುಟ್ಟುಕೊಳ್ಳುವಾಗ
ಲೋಕಕ್ಕೆ
ಬೆಳಕಿನ ಸಂಭ್ರಮ ..!

ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ  ..!

ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು
ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..!

ಇಡೀ ಇರುಳು
ಪ್ರೇಮಿಸಿದ ಫಲವೆನ್ನುವ ಹಾಗೆ
ಕತ್ತಲು ಬೆಳಕಾಗಿ ಮಾರ್ಪಟ್ಟಿತು
ಹೆಚ್ಚೇನಿಲ್ಲ
ಪ್ರೇಮಿಸುವದೆಂದರೆ
ಕತ್ತಲನ್ನು ಬೆಳಕಾಗಿಸುವುದು
ಇದು ಇರುಳಿನ
ನೀತಿಪಾಠವಂತೂ ಅಲ್ಲ ..!

ಸೂರ್ಯನಿರುವ ಹಗಲಿನಲ್ಲಿ
ಹಣತೆ ಹಚ್ಚುವ
ನಿನ್ನ  ಸಂಭ್ರಮಕೆ ಏನನ್ನಲಿ ?
ಉರಿವ ಹಣತೆ
ಹೇಳುವುದು ಇದನ್ನೇ
ಸುಡದೆ ಬೆಳಕಾಗಲು
ಬರದು ..!


ತನ್ನಷ್ಟಕ್ಕೆ ತಾನು
ಉರಿದು ಬೆಳಕಾದ
ಸೂರ್ಯನ ಪಾಠ ಓದಲಾಗದ
ಕುರುಡರು
ಈ ದಿನ ಹಣತೆ ಹಚ್ಚಿ
ಕತ್ತಲೆ ಕಳೆಯಲೆಂದು
ಪ್ರಾರ್ಥನೆಗೆ ಕುಳಿತರು
ಒಂದು ಕರುಣೆಯ ನೋಟ
ಬಿಟ್ಟರೆ
ಅವರ ನಡೆ
ನನ್ನ ಶಬ್ದಗಳಿಗೆ ನಿಲುಕದು
ಎಲ್ಲ ದಾಖಲೆ ಮುರಿದಿದೆ
ಕುರುಡರ ಲೋಕದಲ್ಲಿ
ಕನ್ನಡಿಯ ಮಾರಾಟ
-ಚಿತ್ರಕೃಪೆ- ಅಂತರ್ಜಾಲ

ಶನಿವಾರ, ಸೆಪ್ಟೆಂಬರ್ 17, 2011

ಹನಿ ಕವಿತೆಗಳು

ಬಿ ಎಂ ಬಷೀರ್
ಫೈಲುಗಳ ನಡುವೆ ಧೂಳು ತಿನ್ನುತ್ತಿದ್ದ ಕೆಲವು ಹನಿಗವಿತೆಗಳು.

ರಜಾ
ನನ್ನೆದುರಲ್ಲೇ ಮಿಲಿಟರಿ ವ್ಯಾನೊಂದು
ಸರಿದು ಹೋದದ್ದು

ಪುಟ್ಟ ಮಗು ಅದರೆಡೆಗೆ ಕೈ ಬೀಸಿ
‘ಟಾ..ಟಾ..’ ಎಂದದ್ದು

ಬಾಗಿಲ ಪಕ್ಕ
ಕುಳಿತ ಯೋಧನೊಬ್ಬ
ಅದನ್ನು ಸ್ವೀಕರಿಸಿದ್ದು
ಒಂದೇ ಕ್ಷಣಕ್ಕೆ ನಡೆದು ಹೋಯಿತು!

ಇನ್ನು ಯುದ್ಧಕ್ಕೆ ರಜಾ!

ಪಾವತಿ
ಗುಲಾಬಿ ಮತ್ತು ಕವಿತೆ ಜತೆ
ಬರುತ್ತಿದ್ದೇನೆ
ಧಾರಾವಿಯ ಕಪ್ಪು ಬೆಳಕಿನ ದಾರಿ ಒಡೆದು
ಎದ್ದು ಬಂದ ಪುಟ್ಟ ಮಗು
ಗುಲಾಬಿಯನ್ನು ಕೈ ಮಾಡಿ ಕರೆಯಿತು
ನನ್ನ ಕವಿತೆ ಗುಲಾಬಿಯ ಜೊತೆ
ಮಗುವಿನ ಕಣ್ಣಲ್ಲಿ
ಇಂಗಿ ಹೋಯಿತುಪಡೆದ ಸಾಲ ಮರಳಿದಂತೆ

ತಾಯಿ
ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿ ಬಿಟ್ಟಿತು
ಆ ಗಾಯವನ್ನು ಆರದಂತೆ
ಜೋಪಾನ ಇಟ್ಟು
ನರಳುತ್ತಾಳೆ ತಾಯಿಇಂದಿಗೂ ಸುಖದಿಂದ!

ಮೌನ

ಸಾವು ಹಗುರ
ಅದು ಬಿಟ್ಟು ಹೋಗುವ
ಮೌನ
ಹೊರಲಾಗದಷ್ಟು ಭಾರ!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

ಬುಧವಾರ, ಸೆಪ್ಟೆಂಬರ್ 14, 2011

ಇರುಳ -ಬೆಳಕಿನ ಸೊಲ್ಲು -೩


ಒಂದೆಡೆ ಹಣತೆ
ಮತ್ತೊಂದೆಡೆ ಬೆಂಕಿ ಹುಳುಗಳ ಗುಂಪು
ಹಗಲು ಇರುಳಿನೊಂದಿಗೆ
ಪರಿ ಪೈಪೋಟಿಗೆ ಬೀಳಬಾರದಿತ್ತು
ಹಗಲಿನಲಿ ದಾಟಲಾಗದ
ಗಡಿಗಳನು
ಇರುಳು ದಾಟಿದೆ
ಏನು ಮಾಡಲಿ
ಪ್ರೀತಿ ಇರುವುದು
ಬದನಾಮ ರಸ್ತೆಯಲ್ಲೇ ..!
ಬೆಳಕಿನ ದಾಸನಾದರೆ
ಕತ್ತಲು ಕಳೆಯುತ್ತದೆಂದರು ;
ಸರ್ವತಾ ನನ್ನಿಂದಾಗದು
ಎಂದು ಹೇಳಿ ಕಳಿಸಿದೆ ....!
ಬೆಳಕು
ಅಹಂಕಾರದ ಪಟ್ಟಕ್ಕೆರಿತು ;
ಕತ್ತಲಾಗಲು
ಬೇರೇನು ಬೇಕಿತ್ತು ...?
ಲೋಕದ ಹಾಗೆ
ಹಗಲಿರಳುಬೆಳಕಿನದೇ ದ್ಯಾನವಾಗಿ
ಬೆಳಕಿನ ಬೆನ್ನಟ್ಟಿ ಹೊರಟೆ
ದಾರಿ ಮದ್ಯ ಒಂದು ಸಲ
ಹಿಂತಿರುಗಿ ನೋಡಿದೆ
ಕತ್ತಲು ಬೆನ್ನ ಹಿಂದಿತ್ತು
ಆಗಷ್ಟೇ
ನಂಬಿಕೆಗೆ ಅರ್ಹವಾದುದು
ಮುಂದಿರುವುದಲ್ಲ
ಬೆನ್ನ ಹಿಂದೆ ಬರುವುದು
ಎಂದಿತು ವಿವೇಕ ...
ಲೋಕವೇ ಏನಾದರೂ
ಅಂದುಕೋ
ವಿವೇಕವನ್ನು ಮೀರಲಾರೆ ...!
ಹೀಗೂ ಅಂದರಂತೆ
ಹಿಂದಿನವರು ; ಬೆಳಕು
ಇಲ್ಲದಿರುವುದೇ ಕತ್ತಲೆಯ ಹೆಸರು
ನಾನೂ ಹುಡುಕುತ್ತಿದ್ದೇನೆ
ಬೆಳಕಿನಲ್ಲಿ ಕತ್ತಲನ್ನು
ಕಾಣಲೊಲ್ಲದು ...!
ಇರುಲಾಯಿತು ;
ಹೊರಗಿದ್ದ ಬೆಳಕು
ಒಳಮನೆಗೆ ಬಂದಿತು
ಬೀದಿ ಬಾಗಿಲು
ಮುಚ್ಚಿ ಬಿಟ್ಟವು
ಬೆಳಕೂ ಬಂಧಿಯಾಯಿತು ...!

ಕತ್ತಲಾಯಿತು ;
ಇರುಳು ಬೆಳಕಿಗೆ
ಮರುಹುಟ್ಟು ಕೊಟ್ಟಿತು

-ಅನಾಮಿಕ

ಗಾಯ ಮತ್ತು ಇತರ ಕತೆಗಳು

ಬಿ . ಎಂ . ಬಷೀರ್

ಧ್ಯಾನ
ಶಿಷ್ಯ ಕಣ್ಣು ಮುಚ್ಚಿ ಧ್ಯಾನಸ್ಥನಾಗಿದ್ದ.
ಸಂತ ಹೇಳಿದ. ‘‘ಮೂರ್ಖ...ಯಾಕೆ ಹೇಡಿಯಂತೆ ಕಣ್ಣು ಮುಚ್ಚಿದ್ದೀಯ? ಕತ್ತಲಲ್ಲಿ ಏನನ್ನು ಹುಡುಕುತ್ತಿದ್ದೀಯ? ತೆರೆ ಕಣ್ಣನ್ನು, ನೋಡು ಜಗವನ್ನು. ಬೆಳಕಲ್ಲಿ ಹುಡುಕು’’

ಕೇಳುವುದು!
ಆತ ಹೆಣ್ಣು ನೋಡುವುದಕ್ಕೆ ಹೋಗಿದ್ದ.
ಹೆಣ್ಣನ್ನು ನೋಡಿದವನೇ ಕೇಳಿದ ‘‘ನಿಮಗೆ ಹಾಡುವುದಕ್ಕೆ ಬರುತ್ತದೆಯೆ?’’
ಹೆಣ್ಣು ತಕ್ಷಣ ಮರು ಪ್ರಶ್ನಿಸಿದಳು
‘‘ನಿಮಗೆ ಕೇಳುವುದಕ್ಕೆ ಬರುತ್ತದೆಯೆ?’’

ಮರ
ಒಂದು ಬೀಜ ಯಾರದೋ ಕೈಯಿಂದ ತಪ್ಪಿ ಉದುರಿ ಒದ್ದೆ ಮಣ್ಣಿನ ಮೇಲೆ ಬಿತ್ತು.
ನಾಲ್ಕೇ ದಿನದಲ್ಲಿ ಅದು ಮೊಳಕೆ ಒಡೆಯಿತು.
ಕೆಲವು ಸಮಯ ಕಳೆದರೆ ಗಿಡವಾಗಿ, ಮರವಾಯಿತು.
ಹೂ ಬಿಟ್ಟಿತು...ಹಣ್ಣಾಯಿತು....
ಒಬ್ಬಾತ ಬಂದವನೇ ಘೋಷಿಸಿದ ‘‘ಇದು ನನ್ನ ಮರ’’

ಅಮ್ಮ!
ಒಂದು ಕಡೆ ಕೋಮುಗಲಭೆ ನಡೆಯುತ್ತಿತ್ತು.
ಪುಟಾಣಿಯೊಬ್ಬ ಆ ಗಲಭೆಯಲ್ಲಿ ಸಿಲುಕಿಕೊಂಡ.
ಗುಂಪೊಂದು ಮಗುವನ್ನು ತಡೆದು ಕೇಳಿತು ‘‘ನಿನ್ನದು ಯಾವ ಧರ್ಮ?’’
ಮಗು ಹೇಳಿತು ‘‘ನನಗೆ ನನ್ನ ಅಮ್ಮ ಬೇಕು...’’
‘‘ಹೋಗಲಿ...ನಿನ್ನ ಅಮ್ಮನ ಧರ್ಮವೇನು?’’ ಗುಂಪು ಕೇಳಿತು.
‘‘ಅಮ್ಮ...’’ ಮಗು ಅಳುತ್ತಾ ಉತ್ತರಿಸಿತು.

ಹಿಮಕರಡಿಗಳು
ಒಬ್ಬ ಶಿಷ್ಯ ಬಂದು ಸಂತನಲ್ಲಿ ಹೇಳಿದ ‘‘ಗುರುಗಳೇ...ನಾನು ಹೆಚ್ಚಿನ ಜ್ಞಾನ ಮತ್ತು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗಬೇಕೆಂದಿದ್ದೇನೆ...ಅಪ್ಪಣೆಕೊಡಿ...’’
‘‘ಜನವೇ ಇಲ್ಲದಲ್ಲಿ ಜ್ಞಾನಾರ್ಜನೆ ಹೇಗಾಗುತ್ತದೆ ಶಿಷ್ಯ?’’
ಶಿಷ್ಯ ಹೇಳಿದ ‘‘ಹಿಮಾಲಯದಂತಹ ಪುಣ್ಯ ಸ್ಥಳದಲ್ಲಿ ತಪಸ್ಸು ಮಾಡಿದರೆ ಬೇಗ ಜ್ಞಾನೋದಯವಾಗಬಹುದಲ್ಲವೆ?’’
ಸಂತ ಗೊಣಗಿದ ‘‘ಹಿಮಕರಡಿಗಳು ಶತಶತಮಾನಗಳಿಂದ ಹಿಮಾಲಯದಲ್ಲೇ ಬದುಕುತ್ತಿವೆ. ಒಂದೇ ಒಂದು ಹಿಮಕರಡಿಗೂ ಜ್ಞಾನೋದಯವಾದ ಸುದ್ದಿ ನನಗೆ ಈವರೆಗೆ ತಿಳಿದು ಬಂದಿಲ್ಲ’’

ಪ್ರಪಂಚ
ಬೇರೆ ಬೇರೆ ಆಶ್ರಮಗಳಲ್ಲಿ ಕಲಿತ ಶಿಷ್ಯರು ಒಟ್ಟು ಸೇರಿದ್ದರು
ಅವರೆಲ್ಲ ಬೇರೆ ಬೇರೆ ಪಂಥಗಳಿಗೆ ಸೇರಿದವರು.
ಒಬ್ಬ ಹೆಮ್ಮೆಯಿಂದ ಹೇಳಿದ ‘‘ನನ್ನ ಗುರುಗಳು ನನಗಾಗಿ ತಾವು ಬರೆದ ಅಪರೂಪದ ಬೃಹತ್ ಗ್ರಂಥವನ್ನೇ ಬಿಟ್ಟು ಹೋಗಿದ್ದಾರೆ’’
ಇನ್ನೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಇಡೀ ವಿದ್ಯಾಸಂಸ್ಥೆಯನ್ನೇ ಬಿಟ್ಟು ಹೋಗಿದ್ದಾರೆ.
ಮಗದೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಹೊಸ ಸಿದ್ಧಾಂತವೊಂದನ್ನು ಬಿಟ್ಟು ಹೋಗಿದ್ದಾರೆ.’’
ಒಬ್ಬ ಶಿಷ್ಯ ಸುಮ್ಮಗೆ ಕೂತಿದ್ದ. ಉಳಿದವರೆಲ್ಲ ಕೇಳಿದರು ‘‘ನಿನಗಾಗಿ ನಿನ್ನ ಗುರುಗಳು ಏನು ಬಿಟ್ಟು ಹೋಗಿದ್ದಾರೆ?’’
ಆತ ಉತ್ತರಿಸಿದ ‘‘ನನಗಾಗಿ ಅವರು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ’’

ಆಸೆ
ಸಂತ ಮರಣಶಯ್ಯೆಯಲ್ಲಿದ್ದ.
ಶಿಷ್ಯರೆಲ್ಲ ಅವನ ಸುತ್ತುಗೂಡಿದ್ದರು.
ಒಬ್ಬ ಶಿಷ್ಯ ಕೇಳಿದ ‘‘ಗುರುಗಳೇ ನಿಮ್ಮದೇನಾದರೂ ಅಂತಿಮ ಆಸೆಯಿದೆಯೆ?’’
ಸಂತ ‘‘ಹೂಂ’’ ಎಂದ.
ಎಲ್ಲ ಶಿಷ್ಯರು ಮುತ್ತಿಕೊಂಡು ‘‘ಹೇಳಿ ಗುರುಗಳೇ’’ ಎಂದರು.
‘‘ಸಾಯುವ ಮೊದಲು ನಾನು ಯಾವುದಕ್ಕಾಗಿಯಾದರೂ ಆಸೆ ಪಡಬೇಕು. ಹೇಳಿ, ಅಂತಹ ವಸ್ತುವೇನಾದರೂ ಈ ಜಗತ್ತಿನಲ್ಲಿದೆಯೆ?’’

ಗಾಯ
ವೈದ್ಯರು ಕೇಳಿದರು ‘‘ಯಾವುದೇ ಇರಿತದ ಗಾಯ ಕಾಣ್ತಾ ಇಲ್ವಲ್ಲ?’’
‘‘ಇಲ್ಲ ಸಾರ್ ತುಂಬಾ ನೋವಾಗುತ್ತಿದೆ...ಡಾಕ್ಟರ್...ಏನಾದ್ರು ಮಾಡಿ...’’
‘‘ಗಾಯ ಆದದ್ದು ಹೇಗೆ’’
‘‘ಗೆಳೆಯನೊಬ್ಬ ಇರಿದ ಡಾಕ್ಟರ್’’
‘‘ಹೌದಾ? ಯಾವುದರಿಂದ?’’
‘‘ಮಾತಿನಿಂದ....’’

ಚಿಟ್ಟೆ
ಅದೊಂದು ಪರೀಕ್ಷೆ ಹಾಲ್.
ಎಲ್ಲರೂ ಬೆವರುತ್ತಾ, ಬೆದರುತ್ತಾ ಗಂಭೀರವಾಗಿ ಪರೀಕ್ಷೆ ಬರೆಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಹಾರುತ್ತಾ ಒಂದು ಬಣ್ಣದ ಚಿಟ್ಟೆ ಬಂತು.
‘‘ಚಿಟ್ಟೆ’’ ಯಾರೋ ಪಿಸುಗುಟ್ಟಿದರು.
ಎಲ್ಲರ ದೃಷ್ಟಿ ಚಿಟ್ಟೆಯಕಡೆಗೆ.
ಒಮ್ಮೆಲೆ ಕಲರವ
ಸೆಕ್ಷನ್ ಉಲ್ಲಂಘಿಸಿ ಆ ಪರೀಕ್ಷೆ ಹಾಲಿಗೆ ಬಂದು ಎಲ್ಲರ ಪರೀಕ್ಷೆಯ ಭಯವನ್ನು ತನ್ನ ರೆಕ್ಕೆಯೊಳಗೆ ಕಟ್ಟಿಕೊಂಡು ಚಿಟ್ಟೆ ನಿಧಾನಕ್ಕೆ ಹಾರಿ ಹೋಯಿತು.
ಈಗ ಎಲ್ಲರೂ ನಗು ನಗುತ್ತಾ ಪರೀಕ್ಷೆ ಬರೆಯತೊಡಗಿದರು.
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

ಶುಕ್ರವಾರ, ಸೆಪ್ಟೆಂಬರ್ 2, 2011

ಇರುಳ - ಬೆಳಕಿನ ಸೊಲ್ಲು -೨


ಕೊಳ್ಳುಬಾಕರ ಅಗಸಿಯಲ್ಲಿ ಹಾಯ್ದು ಬಂದೆ
ಬೆಳಕಾದ ಸೂರ್ಯನಿಗೆ ಬೆಲೆ ಎಷ್ಟೆಂದು ಕೇಳುವ ಮನಸಾಯಿತು ..
ಇರುಳಿನಲಿ
ಸಿಕ್ಕಾದ ಮುಂಗುರುಳ
ಬೆಳಗಿನಲಿ ಬಿಡಿಸಿಕೊಳ್ಳುವಾಗ
ಕೆನ್ನೆಯೂ
ಆ ಸೂರ್ಯನಂತೆ
ಕೆಂಪು ಕೆಂಪು ...!
ಇಳಿಸಂಜೆ ಹೊತ್ತಾದರೂ
ನನಗೆ ಬೆಲೆ ಬರಲಿಲ್ಲ...
ಕೊಳ್ಳುವ ಲೋಕದ
ತಪ್ಪೇನಿತ್ತು ಇದರಲ್ಲಿ ...?
ರೊಕ್ಕ ಕೊಟ್ಟು
ಕೊಳ್ಳುವಂತದ್ದೇನೂ ಇರಲಿಲ್ಲ ನನ್ನ ಬಳಿ

-ಅನಾಮಿಕ

ಗುರುವಾರ, ಸೆಪ್ಟೆಂಬರ್ 1, 2011

ಇರುಳ - ಬೆಳಕಿನ ಸೊಲ್ಲುಹಗಲೆಂದರೆ ಬೆಳಕು
ಇರುಳೆಂದರೆ ಕತ್ತಲು
ಹೆಚ್ಚೇನಿಲ್ಲ
ಕುರುಡರ ಪಾಠಕ್ಕೆ
ಒಂದೇ ಸಾಲು ....!

ಲೋಕದ ಪಟ್ಯದಲಿ
ಇನ್ನೂ
ನೋವು , ಬಡತನ
ಜಾತಿ -ಮತದ ಪದಗಳು
ಹೇರಳವಾಗಿ ಕಾಣುತ್ತಿವೆ ; ಈ ದಿನವಾದರೂ
ಬೆಳಗಾಯಿತೆಂದು
ಹೇಗೆ ಹೇಳಲಿ ....?

ಹಗಲ ಕಣ್ಣಿಂದ
ಇರುಳ ನೋಡುವುದ
ನಿಲ್ಲಿಸಿದೆ ;
ಈಗ
ಇರುಳು
ಬರೀ ಕತ್ತಲೆಂದು
ಹೇಳುವುದು ನನ್ನಿಂದಾಗದು ...!

ನಿನಗೂ ಮಿತಿಯಿದೆ
ನನಗೂ ಮಿತಿಯಿದೆ ಮಿತಿಯ ಬದುಕಿನ ಬಗ್ಗೆ
ಅಸಮಾಧಾನದ ದೀಪ
ಬೆಳಗಾಗುವ ತನಕ
ಉರಿಯಲಿ ಬಿಡು
ಈ ಕ್ಷಣ ನನಗೆ
ನೆನಪಿನಲ್ಲಿ ಉಳಿದಿರುವುದಿಷ್ಟೇ
ಮಿತಿಗಳಿಲ್ಲದ್ದು
ಮಾನವೀಯವಾಗಿಯೂ ಇರಲ್ಲ ...!

ಬೆಳಕ ಬಲ್ಲವ
ಇರುಳಾಯಿತು ಎನ್ನಲಾರ
ಇರುಳ ಬಲ್ಲವ
ಬೆಳಕಾಯಿತು ಎನ್ನಲಾರ
ಇರುಳು ಬೆಳಕಿನ ಬೀಜ
ಬೆಳಕು ಇರುಳಿನ ಬೀಜ
ಹೊರ ಪದರಷ್ಟೇ
ಕಪ್ಪು -ಬಿಳಿ ಬಣ್ಣ
ಎಂಬುದು
ನೀನು ಇಲ್ಲದಿದ್ದಾಗಷ್ಟೇ
ಅರಿವಿಗೆ ಬರುವುದು ...!

ಬೆಳಗಾಯಿತು
ನಿಜ ;
ಬರೀ ಕತ್ತಲೆಯಲ್ಲ
ಕನಸೂ
ಹಾಸುಗೆಯಿಂದ
ಎದ್ದು ನಡೆಯಿತು ..


ಬೆಳಗು
ಕತ್ತಲು ಇಲ್ಲದಿರುವುದಕ್ಕೊಂದು
ಹೆಸರು ..;
ನೆನಪಿಡು
ಬೆಳಕಿನಲ್ಲಿ
ಕನ್ನಡಿ ಇದ್ದರಷ್ಟೇ
ನಿನಗೆ ನಿನ್ನ
ಮುಖ ಕಾಣುವುದು ..!

ರಾತ್ರಿ ಬರೆದ
ಸಾವಿನ ಕವನ
ಮುಂದುವರಿಸಿದೆ
ಸುಮ್ಮನೆ
ಹಗಲು -ರಾತ್ರಿ ತದ್ವಿರುದ್ದ
ಅಂದವರಾರು ...!

ಇರುಳು
ಕಣ್ಣಿಲ್ಲದವನ ಕೈಯಲ್ಲಿ
ಕಂದೀಲಿದ್ದರೂ
ಕಣ್ಣಿದ್ದವನು ಪ್ರಪಾತದ
ಪಾಲಾಗುವುದು ತಪ್ಪುವುದು ...!
೧೦
ಬೆಳಗಾದ ಮೇಲೂ
ಆರಿ ಹೋಗದ
ಹಣತೆಯ ಹಾಗೆ ನೀನು
ನನ್ನ ಬೆಳಕಿನ ಲೋಕದ
ಕತ್ತಲೆ ಕಳೆಯಲು
ಉರಿಯುತ್ತಲೇ ಇದ್ದಿ ..!
೧೧
ಇನ್ನೂ
ಉಳಿದೇ ಇತ್ತು
ಬೆಳಕಿನ ಹಂಬಲ
ಇರುಳಿಗೆ ಮಾತು ಕೊಟ್ಟವರು
ಉಳಿಯುವದಾದರೂ ಹೇಗೆ
ನನ್ನ ಬಳಿ ..
೧೨
ಸೂರ್ಯ ಬರುತ್ತಿರುವ ಹಾಗೆ
ಎಲ್ಲ ದೀಪಗಳು
ಆರುವವು ಎಂದಲ್ಲ ..
ಸೂರ್ಯನ ಬೆಳಕು
ಎಷ್ಟಿದ್ದರೂ
ಸಾಲದಾಯಿತೇನೋ
ಸ್ಮಶಾನದ ದೀಪ
ಆರದೇ ಉಳಿಯುವುದು ...!
-ಅನಾಮಿಕ