ಅನುವಾದ
ವೈಶಾಲಿ ಹೆಗಡೆ
(೧)
ನಿನ್ನ ಎದೆಯೊಳಗೊಂದು ಪುಟ್ಟ ಝರಿಯಿದೆಯೇ
ನಸುನಾಚಿ ಅರಳುವ ಹೂಗಳು ದಡದಲ್ಲಿ
ಕೆನ್ನೆ ಕೆಂಪಾಗಿಸಿಕೊಂಡು ಅದ ಗುಟುಕರಿಸಲಿಳಿಯುವ ಹಕ್ಕಿಗಳು
ನವಿರಾಗಿ ಅದುರುವ ನೆರಳುಗಳು
ಮತ್ಯಾರಿಗೂ ಅರಿವಿಲ್ಲ, ತಣ್ಣಗೆ ಹರಿಯುತಿದೆ ಅಲ್ಲೇ
ಅಲ್ಲೊಂದು ತೊರೆ ಇಹುದೆಂಬ ಹೊಳಹಾದರೂ ಉಂಟೆ
ಆದರೂ ನಿನ್ನ ಬದುಕ ಸಣ್ಣ ಖಾಲಿತನ
ಕುಡಿದು ಬಿದ್ದಿರುವುದು ಅಲ್ಲಿ ದಿನವೂ
ಚೈತ್ರದಲ್ಲಿ ಹುಡುಕು ಆ ತೊರೆಯನ್ನು
ನದಿಗಳೆಲ್ಲ ಉಕ್ಕಿ ಹರಿವಾಗ
ಹಿಮವೆಲ್ಲ ಕಾತರದಿ ಕರಗಿ ಬೆಟ್ಟವಿಳಿವಾಗ
ಸ್ತಬ್ಧ ಸೇತುವೆಗಳೂ ಚಲಿಸುವಾಗ
(Have you got a little brook in heart ಕವಿತೆಯ ಅನುವಾದ)
(೨)
ನಾನು ಸತ್ತಿಹೆ ಸೌಂದರ್ಯಕ್ಕಾಗಿ, ಬಹು ಅಪರೂಪದ್ದು
ಹೊಂದಿಕೊಂಡಿರುವೆ ಈ ಸಮಾಧಿಯಲ್ಲಿ,
ಸತ್ಯಕ್ಕಾಗಿ ಸತ್ತವನೊಬ್ಬ ಮಲಗಿರುವನಿಲ್ಲಿ
ಪಕ್ಕದ ಕೋಣೆಯಲ್ಲಿ
ಅವ ಕೇಳಿದ ಮೆಲ್ಲಗೆ, ನೀನು ಸೋತದ್ದೇಕೆ
"ಸೌಂದರ್ಯಕ್ಕಾಗಿ" ನನ್ನ ಉತ್ತರ
"ಮತ್ತೆ ನಾನು ಸತ್ಯಕ್ಕಾಗಿ -- ಆದರೆ ಸತ್ಯವೂ ಸುಂದರವೂ ಒಂದೇ ಅಲ್ಲವೇ,
ನಾವಿಬ್ಬರೂ ಒಡಹುಟ್ಟಿದವರು" ಅವನ ಮರುತ್ತರ
ಹೀಗೆ ಭೇಟಿಯಾದೆವು ಬಂಧುಗಳು ಆ ರಾತ್ರಿಯಲ್ಲಿ
ಕೋಣೆಗೋಡೆಗಳ ನಡುವೆ ಹರಟಿದೆವು
ಹಾವಸೆಗಳು ಹರಡುತ್ತ ತುಟಿ ತಲುಪುವವರೆಗೆ
ಹಾಗೆಯೆ ನಮ್ಮಿಬ್ಬರ ಹೆಸರು ಮುಚ್ಚುವವರೆಗೆ
(I died for beauty ಕವಿತೆಯ ಅನುವಾದ)