ದೀಪಾವಳಿ – ಕೆಲ ಪದ್ಯಗಳು
-ಲಡಾಯಿ ಬಸು
ಹಣತೆ ಸುಟ್ಟುಕೊಳ್ಳುವಾಗ
ಲೋಕಕ್ಕೆ
ಬೆಳಕಿನ ಸಂಭ್ರಮ ..!
೨
ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ ..!
೩
ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು
ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..!
೪
ಇಡೀ ಇರುಳು
ಪ್ರೇಮಿಸಿದ ಫಲವೆನ್ನುವ ಹಾಗೆ
ಕತ್ತಲು ಬೆಳಕಾಗಿ ಮಾರ್ಪಟ್ಟಿತು
ಹೆಚ್ಚೇನಿಲ್ಲ
ಪ್ರೇಮಿಸುವದೆಂದರೆ
ಕತ್ತಲನ್ನು ಬೆಳಕಾಗಿಸುವುದು
ಇದು ಇರುಳಿನ
ನೀತಿಪಾಠವಂತೂ ಅಲ್ಲ ..!
೫
ಸೂರ್ಯನಿರುವ ಹಗಲಿನಲ್ಲಿ
ಹಣತೆ ಹಚ್ಚುವ
ನಿನ್ನ ಸಂಭ್ರಮಕೆ ಏನನ್ನಲಿ ?
ಉರಿವ ಹಣತೆ
ಹೇಳುವುದು ಇದನ್ನೇ
ಸುಡದೆ ಬೆಳಕಾಗಲು
ಬರದು ..!
೬
ತನ್ನಷ್ಟಕ್ಕೆ ತಾನು
ಉರಿದು ಬೆಳಕಾದ
ಸೂರ್ಯನ ಪಾಠ ಓದಲಾಗದ
ಕುರುಡರು
ಈ ದಿನ ಹಣತೆ ಹಚ್ಚಿ
ಕತ್ತಲೆ ಕಳೆಯಲೆಂದು
ಪ್ರಾರ್ಥನೆಗೆ ಕುಳಿತರು
ಒಂದು ಕರುಣೆಯ ನೋಟ
ಬಿಟ್ಟರೆ
ಅವರ ನಡೆ
ನನ್ನ ಶಬ್ದಗಳಿಗೆ ನಿಲುಕದು
ಎಲ್ಲ ದಾಖಲೆ ಮುರಿದಿದೆ
ಕುರುಡರ ಲೋಕದಲ್ಲಿ
ಕನ್ನಡಿಯ ಮಾರಾಟ
-ಚಿತ್ರಕೃಪೆ- ಅಂತರ್ಜಾಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ