ಒಂದು ಹನಿ ರಕ್ತ
ಈ ಸಲ ನಾನು ಹೋದಾಗ ’ಆನಾ’ ಯೆನಿಸೆಯ್ ನದಿಯ ತಟದಲ್ಲಿ ಧ್ಯಾನಸ್ಥಳಾಗಿದ್ದಳು ಆಕೆ ಮತ್ತೆ ಎಚ್ಚರವಾಗುವಾಗ ಸೂರ್ಯ ಇನ್ನಷ್ಟು ಕೆಂಪಾಗಿದ್ದ. ಅವನ ಒಡಲಲ್ಲೂ ಅದೇ ಸೊಲ್ಲು
ಅಲ್ಲಿ ಜೀವಂತ ಹೆಣಗಳನ್ನು ತೇಲಿಬಿಟ್ಟಿದ್ದಾರೆ ಆನಾಳಿಗೆ ಬರೇ ವಿದಾಯ ಹೇಳುವುದೇ ಬದುಕಾಗಿದೆ ಮನೆಯಲ್ಲಿ ಆಕೆಗಾಗಿ ಕಾದ ನಲ್ಲ ಸಿಟ್ಟು ಮಾಡಿಕೊಂಡು ವಿದಾಯ ಹೇಳಿದ್ದ ಹೀಗೆ ಹೋದವರಲ್ಲಿ ಈತ ನಾಲ್ಕನೆಯವ!
ನನಗದು ಅರ್ಥವಾಗಿತ್ತು ಆನಾಳ ಮನಸು ಯಾವುದಕ್ಕೂ ತಲ್ಲಣಿಸುತ್ತಿಲ್ಲ ಅವರನ್ನು ಬಿಟ್ಟು
ಆ ಬೀದಿಯ ಅಂಚಿನಲ್ಲಿ ಕೃಶಗೊಂಡ ಜೀವವೊಂದು ಸುಮ್ಮನೆ ಚಲಿಸಿದಂತೆ ಭಾಸವಾಗುತ್ತಿದೆ ಅಷ್ಟೇ ಸಾಕು ಅವರೆಲ್ಲ ಚುರುಕಾಗುತ್ತಾರೆ
ಕೈಚೀಲದಿಂದ ಚಿಂದಿ ಚಿಂದಿ ಕಾಗದಗಳು ಹೊರಬರುತ್ತವೆ ಮುಗಿಲೂ ಸ್ತಬ್ಧ ಒಂದು ಕ್ಷಣ ಆನಾ ಹೇಳುತ್ತಾಳೆ, ನಿಮಗೆ ಕೊಡಲು ನನ್ನಲ್ಲಿ ಏನೂ ಇಲ್ಲ ಅವರು ಹೇಳುತ್ತಾರೆ, ಕವಿತೆ ಕೊಡು ಬೇರೇನೂ ಬೇಡ
ಅವರು ಕವಿತೆಯನ್ನು ಪ್ರಸಾದದಂತೆ ಕಣ್ಣಿಗೆ ಒತ್ತಿಕೊಂಡು ಕುಡಿಯುತ್ತಾರೆ ಹಾಸಿ ಹೊದೆಯುತ್ತಾರೆ ಕೆಲವರಿಗೆ ನೆಮ್ಮದಿಯ ಸಾವು ಇನ್ನು ಕೆಲವರಿಗೆ ದಿನದಿನದ ಕಾವು
ಆನಾ ಕವಿತೆ, ಸಾಮ್ರಾಜ್ಯದ ಬಾಯಿಗೆ ಬೀಗ ಬಂಧನದ ಸರಪಳಿಗೆ ಕೀಲಿಕೈ ಸಾವಿನ ಮನೆಗೆ ಸಾಂತ್ವನಗೀತೆ *** ಈ ಸಲ ನಾನು ಸುಮ್ಮನೆ ಬರಲಿಲ್ಲ ನಿನ್ನ ಲೇಖನಿಯ ಹನಿ ಶಾಯಿ ಬೇಕು ಎಂದೆ ಆಕೆ ಒಂದು ಹನಿ ರಕ್ತ ಕೊಟ್ಟಳು ನನ್ನ ಕವಿತೆಗಳಿಗೆ ಜೀವದಾನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ