ಬುಧವಾರ, ಮೇ 11, 2011

ಮತ್ತೆ ಮತ್ತೆ ಕ್ಷಮಾ,ಮನಸೆಲ್ಲ ಅವಳ ಘಮ!:ಅಂಜಲಿ ಲಹರಿ




ಅಂಜಲಿ ರಾಮಣ್ಣ



ಸಂಧ್ಯಾ ಆಕೆಯ ಹೆಸರು. ನಾಲ್ಕು ದಿನಗಳಲ್ಲಿ ಎಂಟು ಬಾರಿ ಕರೆಮಾಡಿದ್ದಳು. ಭೇಟಿಯಾಗಬೇಕಿತ್ತಂತೆ. ಚುಟುಕಾಗಿಯೇ ಏನು ವಿಷಯ ಅಂತ ತಿಳಿದ್ಕೊಂಡೆ. ಇಂಟರ್ನೆಟ್ ಸಮಾಜಕ್ಕೆ ಅದು ತುಂಬಾ ಸಣ್ಣ ವಿಚಾರ ಅನ್ನಿಸಿತ್ತು. ಅದಕ್ಕೆ “ಈಗೇನಮ್ಮ ಬೇಕಾದಷ್ಟು ಕಡೆ ಸಪೋರ್ಟ್ ಗ್ರೂಪ್ ಇರುತ್ತೆ. ಯಾರನ್ನಾದ್ರು ಸಂಪರ್ಕಿಸಿ. ನನಗೆ ಟೈಂ ಇಲ್ಲ” ಅಂದೆ. ಆಕೆ ಇಂಗ್ಲಿಷ್ನಲ್ಲಿ “ಹಾಗನ್ನ್ಬೇಡಿ ತಡವಾದ್ರೂ ಪರ್ವಾಗಿಲ್ಲಾ, ನಿಮ್ಮನ್ನೇ ನೋಡ್ಬೇಕು” ಅಂದಳು. ಯಾಕೋ ಗೊತ್ತಿಲ್ಲ ಈ ನಡುವೆ ಇಂಥ ವಿಚಾರಗಳೆಲ್ಲಾ ನನ್ನನ್ನು ಭಾವುಕಳನ್ನಾಗಿ ಮಾಡಲ್ಲ. ಹಾಗಾಗಿ ಅವರಿವರಿಗೆ ರೆಫೆರ್ ಮಾಡಿಬಿಡ್ತೀನಿ. ಆದರೆ ಇವಳು ಮಾತ್ರ ಪಟ್ಟು ಬಿಡುತ್ತಲೇ ಇಲ್ಲ. ನಾನೂ ಸಾಕಷ್ಟು ಸಬೂಬು ಹೇಳಿದೆ. ಕೊನೆಗೆ ಮಣಿದೆ. ನಾಡಿದ್ದು ಶುಕ್ರವಾರ ಬೆಳಗ್ಗೆ ೧೧ಕ್ಕೆ ಭೇಟಿ ಸಮಯ.



ಚೇಂಬರ್ನಿ ಹಾರು ಪರದೆಯ ಸಂಧಿನಿಂದ ಅವನು ಮಾತ್ರ ಕಾಣ್ತಿದ್ದ. ಕೈಕಟ್ಟಿಕೊಂಡು ಕೂತಿದ್ದ. ಇಬ್ಬರನ್ನು ಒಳಗೆ ಬರಹೇಳಿದೆ. ಆತ ಮಗುವನ್ನು ಎತ್ತಿಕೊಂಡಿದ್ದ. ಅವಳು ತಿಂದುಂಡ್ಕೊಂಡಿರೋ ಶಿಲ್ಪಶೆಟ್ಟಿಯ ಹಾಗಿದ್ಲು. ಗಂಡ ಹೆಂಡತಿ ಮಗುವನ್ನು ನೋಡ್ದಾಗ ಏನೋ ಹಿತವೆನಿಸಿತು. ಮೈಸೂರಿನವರು ಅಂತ ಗೊತ್ತಾದಾಗ ಹಾಗೆನಿಸಿದ್ದಕ್ಕೆ ಅಚ್ಚರಿಯಾಗಲಿಲ್ಲ. ಶ್ರೀಮಂತರು, ವಿದ್ಯಾವಂತರು, ಮದುವೆಯಾಗಿ ಹನ್ನೆರಡು ವರ್ಷಗಳಾದ್ರು ಮಗುವಾಗದ್ದಕ್ಕೆ ದತ್ತು ತೆಗೆದುಕೊಂಡ ಮಗುವಿಗೀಗ ನಾಲ್ಕೂವರೆ ವರ್ಷ. “ಏನ್ಪುಟ್ಟೀ ನಿನ್ನ್ಹೆಸರು” ನಾನು ಕೇಳಿದೆ. ಅಪ್ಪನ ಮುಖ ನೋಡಿ “ಅಪ್ಪ ನನ್ನ್ ಎತರು ತಮ ಅಲ್ಲಾ” ಅಂತು ಮುದ್ದು ಪುಟಾಣಿ. “ಕ್ಷಮಾ” ಅಂತ ಅಮ್ಮ ತಿದ್ದಿದಳು. ಅವನು ನಕ್ಕು ಸುಮ್ಮನಾದ. ಒಂದೆರಡೇ ನಿಮಿಷಗಳಲ್ಲಿ ಮಗು ಆತನ ತೊಡೆ ಬಿಟ್ಟಿಳಿದು ಆಫೀಸಿನಲ್ಲೆಲ್ಲಾ ಪಾದರಸದಂತೆ ಹರಿದಾಡುತ್ತಿತ್ತು. ಮತ್ತೆ ಅದೇ ಶೈಲಿಯಲ್ಲಿ ಕೂತಿದ್ದ ಅವನು. ಸಂಧ್ಯಾ ಹೇಳ್ತಾ ಹೋದಳು “ನಮಗೇನ್ಮಾಡೋದೋ ಗೊತಾಗ್ತಿಲ್ಲಾ. ಕೆಲವರು ಹೇಳಿ ಬಿಡಿ ಅಂತಾರೆ, ಮತ್ತೆ ಕೆಲವರು ಯಾಕೆ ಹೇಳ್ಬೇಕು ಅಂತಾರೆ..... ಏನ್ಮಾಡೋದು ಗೊತ್ತಾಗ್ತಿಲ್ಲಾ” ಅಪ್ಪನ ಕಟ್ಟಿದ ಕೈ ಎದೆಯಿಂದ ಇಳಿಯಲಿಲ್ಲ. ಆಕೇನೇ ಮುಂದುವರೆಸಿದಳು “ಹೇಳ್ಬೇಕೂಂತಂದ್ಕೊಂಡ್ರೂ ಹೇಗ್ಹೇಳೋದು ....ನಮ್ಮಿಬ್ಬರಿಗೂ ಎಂದೂ ಅವಳು ನಮ್ಮ ಹೊಟ್ಟೆಯಲ್ಲಿ ಹುಟ್ಟಿದವಳಲ್ಲ ಅನ್ನ್ಸೋದೇಯಿಲ್ಲ... ಹೇಗೆ ಹೇಳ್ಲೀ......” ಅವಳು ಅಳುತ್ತಿದ್ದಳು ಅದರಲ್ಲೂ ವಿದ್ಯಾವಂತರ ಡಿಗ್ನಿಟಿ ಕಾಣ್ತಿತ್ತು. ನನ್ನ ಕಣ್ಣು ಅಪ್ಪನ ಮೇಲೆ ಹೊರಳಿತು ಆತ ಅದೇ ಭಂಗಿಯಲ್ಲಿ ಸ್ಥಾಯಿಯಾಗಿದ್ದ. ಆಕೆಯ ಮಾತು ಕೇಳ್ತಿದ್ದ್ರೆ ಯಾರ ಕರುಳೂ ಕಣ್ಣೀರಾಗ್ತಿದ್ದಿದ್ದಂತೂ ಖಂಡಿತ. “ಹೌದು ಯಾಕೆ ಹೇಳ್ಬೇಕೂಂತ?” ಒಂದ್ನಿಮಿಷ ನನ್ನನ್ನೂ ಇದೇ ಪ್ರಶ್ನೆ ಕಾಡಿತು. ಅಲ್ಲಿದ್ದದ್ದು ನಾಮ್ಮವರೇ ಆದರೂ ಮೂರು ನಿಮಿಷಗಳ ಮೌನ ಮೂವತ್ತು ಜನರಿಗೆ ಹಂಚುವಷ್ಟಿತ್ತು. ಬೇಡ ಬೇಡವೆಂದರೂ ಮನಸ್ಸು ಇನ್ನೊಮ್ಮೆ “ಅಪ್ಪನನ್ನು ನೋಡು” ಎನ್ನುತ್ತಿತ್ತು. ನನಗ್ಯಾಕೋ ಆ ಮಗುನೇ ಅವನನ್ನು ದತ್ತು ತೆಗೆದುಕೊಂಡಂತನಿಸಿತು! ವಯಸ್ಸಿನಲ್ಲಿ ಇಬ್ಬರೂ ನನಗಿಂತ ಸ್ವಲ್ಪ ದೊಡ್ದವರಂತೆಯೇ ಕಂಡರು. ಆದರೂ ನಾನೀಗ ಭಾವುಕಳಾಗುವ ಹಾಗಿಲ್ಲ. ಸಾಂತ್ವನದ ಜವಾಬ್ದಾರಿ ಹೊತ್ತವಳಲ್ಲವೇ? ತೋಚಿದ್ದು, ಓದಿದ್ದು, ವೃತ್ತಿ ಎಲ್ಲದರ ಸಮಾಗಮವನ್ನಾಗಿಸಿ ಏನೇನೋ ಹೇಳಿದೆ. ಅವಳು “ಥ್ಯಾಂಕ್ಸ್” ಎಂದೆನ್ನುತ್ತಾ ಎದ್ದಳು. ಆತ ಈಗ ಕಟ್ಟಿದ್ದ ಕೈ ಬಿಚ್ಚಿ ನನ್ನ ನೋಡಿ ಸುಮ್ಮನೆ ನಕ್ಕ. ಕ್ಷಮಾ ಓಡಿ ಬಂದು ಅಪ್ಪನ ಹೆಗಲೇರಿತು. ಅವರು ಹೊರಟರು.



ಕಿಟಕಿಯಿಂದ ಬಗ್ಗಿ ನೋಡಿದೆ ಧಾರಾಕಾರ ಮಳೆ. ಹಣೆ ಮೇಲಿನ ಬೆವರು ಕೈ ಸವರಿತು. ಕೂತಲ್ಲಿಂದಲೇ ಎಸಿ ಸ್ವಿಚ್ ಹಾಕ್ಕೊಂಡೆ. ಕ್ಷಮಾ.... ಕ್ಷಮಾ.... ಕ್ಷಮಾ... “ಅಪ್ಪ ನನ್ನ್ ಎತರು ತಮ ಅಲ್ಲಾ?”... ರೂಮೆಲ್ಲಾ ಕ್ಷಮಾಳ ಘಮ!



***



ನನಗೂ ಆಗ ಅದೇ ವಯಸ್ಸು. ನಗು, ತುಂಟತನ ಎಲ್ಲಾ ಥೇಟ್ ಪಪ್ಪನ ಹಾಗೆ. ಫಟಫಟ ಅಂತ ಪಪ್ಪನ ತರಹಾನೆ ಥಟ್ ಅಂತ ಮಾತಾಡ್ತಿದ್ದೆ. ಪ್ರಶ್ನೆ ಕೇಳ್ತಿದ್ದೆ. ನಾನು ಪಪ್ಪನ ಫ಼ೇವರೇಟ್ ಮಗಳು. ತಲೆ ಮೇಲೆ ಹೊತ್ತು ತಿರುಗಿಸುತ್ತಿದ್ದ ಪಪ್ಪನ್ನ ಕಂಡು ಅಜ್ಜಿ ಎಷ್ಟೋ ಬಾರಿ “ಹೆಣ್ಣು ಹುಡುಗೀನ ಹಾಳು ಮಾಡಿಬಿಡ್ತೀಯಾ” ಅಂತ ಬೈತಿರ್ತ್ತಿದ್ದರು. ಯಾವುದಕ್ಕೂ ಪಪ್ಪ ಡೋಂಟ್ ಕೇರ್. ಏನಾದರು ನನಗೆ ಬೇಕು ಅಂತ ನನಗೇ ಗೊತ್ತಾಗೋದಕ್ಕೆ ಮೊದಲೇ ಪಪ್ಪನಿಗೆ ಹೇಗೆ ಗೊತಾಗ್ತಿತ್ತು? ಈಗಲೂ ಆಶ್ಚರ್ಯ ಅನ್ನಿಸುತ್ತೆ. “ಈ ಹೆಣ್ಣು ಎಲ್ಲಾ ನಮ್ಮಣ್ಣನ ಹಾಗೆ” ಅಂತ ಸೋದರತ್ತೆ ಸೋಟೆ ತಿರುವಿದ್ದು ನೆನಪಿದೆ. “ನೀನು ಯಾರ ಮಗಳು?” ಅಂತ ಕೇಳ್ದೋರಿಗೆಲ್ಲ ನನ್ನಿಂದ ಫಟ್ ಅಂತ ಬರ್ತಿದ್ದ ಉತ್ತರ “ನಾನು ಪಪ್ಪನ ಮಗಳು” ಆಗೆಲ್ಲಾ ಪಪ್ಪನ ತುಟಿಯಂಚಲಿ ಏನೋ ಒಂಥರದ ನಗು ಹಾದು ಹೋಗ್ತಿದ್ದದ್ದು ಅಕ್ಷಿಪಟಲದಲ್ಲಿ ಅಚ್ಚೊತ್ತಿದೆ. ಇಷ್ಟೆಲ್ಲಾ ನಾನು ಪಪ್ಪನವಳು ಮತ್ತು ಪಪ್ಪ ನನ್ನ ಪಪ್ಪ ಮಾತ್ರ! ಹೀಗಿದ್ರೂ, ನನ್ನ ಕೆಣಕೋಕ್ಕೆ ಅವರ ಫ್ರೆಂಡ್ಸ್ ಮತ್ತು ಆಫೀಸಿನವರೆಲ್ಲ “ನೀನು ನಿಮ್ಮಪ್ಪನ ಮಗಳಲ್ಲ. ನಿನ್ನ ಒಂದು ಸೇರು ರಾಗಿ ಕೊಟ್ಟು ಸರಗೂರು ಸಂತೆಯಿಂದ ಕೊಂಡ್ಕೊಂಡ್ಬಂದರು” ಅಂತ ಹೇಳ್ತಿದ್ದಾಗ ನನ್ನ ಚಿನಕುರುಳಿ ಮಾತಿಗೆ ಪೂರ್ಣ ವಿರಾಮ ಬೀಳ್ತಿತ್ತು. ದುಃಖ ಗಂಟಲಲ್ಲೇ ಮನೆಮಾಡ್ತಿತ್ತು. “ಹೌದಾ ಪಪ್ಪ?” ಅನ್ನೋ ಪ್ರಶ್ನಾರ್ಥಕ ಕಣ್ಣಲ್ಲಿಟ್ಟ್ಕೊಂಡು ಪಪ್ಪನ್ನ ನೋಡ್ತಿದ್ದೆ. ಅವರು ಏನೂ ಮಾತಾಡ್ತಿರಲಿಲ್ಲ. ಮತ್ತೆ ಪಪ್ಪನ ತುಟಿಯಂಚಲಿ ಏನೋ ಒಂಥರದ ನಗು ಹಾದು ಹೋಗ್ತಿತ್ತು. ನನಗೆ ಏನೋ ಸಮಾಧಾನ! ವಿಶ್ವಾಸ ಹುಟ್ಟಿಸೋಕ್ಕೆ ಮಾತಿನ ಹಂಗೇಕೆ? ಮನೆ ಭರ್ತಿ ಮಕ್ಕಳಿದ್ದ ಸಂಸಾರದಲ್ಲಿ ಬಿಳಿ ಅಕ್ಕ “ನಿನ್ನ ರಾಗಿ ಕೊಟ್ಟು ತಂದ್ಹೊತ್ತಿಗೆ ನೀನು ಕಪ್ಪು” ಅಂತ ಹಂಗಿಸುತ್ತಿದ್ದಾಗ ನನಗೆ ಎಂದೂ ಏನೂ ಅನ್ನಿಸುತ್ತಿರಲಿಲ್ಲ. “ನೀನು ಪಪ್ಪನ ಮಗಳಲ್ಲ” ಅಂದಾಗ ಮಾತ್ರ ನನ್ನದು ಅದಿಗಂತ ಮೌನ, ದುಃಖ..... ಆದರೆ ಪಪ್ಪನದು ಅದೇ ನಗು. ನಾನು ಒಮ್ಮೆಯೂ ಬಾಯ್ಬಿಟ್ಟು “ಪಪ್ಪ ನಾನು ನಿನ್ನ ಮಗಳಲ್ಲ್ವಾ” ಅಂತ ಕೇಳಲಿಲ್ಲ. ಎಲ್ಲರೂ ಛೇಡಿಸುತ್ತಿದ್ದಾಗಲೂ ಒಮ್ಮೆಯೂ ಪಪ್ಪ ಬಾಯ್ಬಿಟ್ಟು “ನೀನು ನನ್ನ ಮಗಳು” ಅಂತ ಹೇಳಲಿಲ್ಲ.... ಆಗೆಲ್ಲಾ ಪಪ್ಪನದು ಅದೆಂಥ ನಗು! ಈಗಲೂ ಯಾವ ಕಷ್ಟದಲ್ಲೂ, ಅಳುವಿನಲ್ಲೂ ನನ್ನ ಕೈಹಿಡಿದು ನಡೆಸೋದು ಅದೇ. ಹೌದಲ್ಲಾ, ಪಪ್ಪಾನೂ ಕಪ್ಪು ಅದಕ್ಕೆ ನಾನೂ ಕಪ್ಪು? ನಾನೀಗ ಪಪ್ಪನಂಥೆ ನಗ್ತಿದ್ದೀನಿ. ಒಮ್ಮೆ ಡೆಂಟಿಸ್ಟ್ ಹತ್ತಿರ ಹೋಗಿದ್ದಾಗ ನನ್ನ ಎಡ ಕೋರೆಹಲ್ಲಿನ ಪಕ್ಕದ ಸಂದಿ ನೋಡಿ ಅವರು “ನೀವು ಇದನ್ನು ಫಿಲ್ ಮಾಡಿಸಿಕೊಳ್ಳಿ, ನಿಮ್ಮ ನಗು ಇನ್ನೂ ಸುಂದರವಾಗುತ್ತೆ” ಅಂದಾಗ ನಾನು ಬೇಡ ಬೇಡ ಖಂಡಿತಾ ಬೇಡ ಅಂತ ಹೊರಬಂದಿದ್ದಕ್ಕೆ ಮತ್ತೇನೂ ಕಾರಣವಿಲ್ಲ. ಪಪ್ಪನಿಗೂ ಅದೇ ಜಾಗದಲ್ಲಿ ಹಲ್ಲು ಹಾಗೇ ಇದೆ. ನಾನು ಪಪ್ಪನ ಮಗಳು... ಅದಕ್ಕಿಂತ ಹೆಚ್ಚಿನ ಸೌಂದರ್ಯ ನಾನು ಬಯಸಲಾರೆ. ನನಗೆ ಬೇಕಿಲ್ಲ.



ಅಕಸ್ಮಾತ್ ಪಪ್ಪ ನಾನು ಅವರ ಮಗಳಲ್ಲ ಅಂದುಬಿಟ್ಟಿದ್ದಿದ್ದರೆ? ಸಾಧ್ಯಾನೇ ಇಲ್ಲ, ಆ ನಗು ಮೋಸ ಮಾಡೋಲ್ಲ. ಆ ದಿನ ನಾನು ಪಪ್ಪ ಆಗ್ರಾದಿಂದ ತಂದಿದ್ದ ಹಳದಿ ಬಣ್ಣದ ಫ್ರಿಲ್ಸ್ ಇದ್ದ ಫ್ರಾಕ್ ಹಾಕ್ಕೊಂಡಿದ್ದೆ..... ಅರೆ, ಇವತ್ತು ಕ್ಷಮಾ ಕೂಡ ಅಂಥದ್ದೇ ಬಟ್ಟೆ ಹಾಕಿಕೊಂಡಿದ್ದಲ್ಲ್ವಾ? ಮತ್ತೆ ಕ್ಷಮಾ... ಕ್ಷಮಾ.... ನೆನಪಿನಲ್ಲೆಲ್ಲಾ ಕ್ಷಮಾಳ ಘಮ!



***



ಇನ್ನೊಂದಷ್ಟು ವರ್ಷಗಳಲ್ಲಿ ಕ್ಷಮಾ ಕೂಡ ಹೀಗೇ ಹೇಳುತ್ತಿರಬಹುದಾ? “ಪ್ರೀತಿಯ ಅಪ್ಪ ಈಗ ನನಗೆ ಗೊತ್ತು. ನಾನು ಈ ಮನೆಗೆ ಬಂದವಳು. ನೀವು ಕರೆತಂದವಳು. ಆದರೆ ನೀವು ಎಂದೂ ಹಾಗೆ ಹೇಳಲೇ ಇಲ್ಲ. ಯಾಕಂದ್ರೆ ನಾನು ನಿಮ್ಮ ಮಗಳು ತಾನೆ ಅಪ್ಪ? ಊರೆಲ್ಲಾ ನನ್ನ ದತ್ತು ಬಂದವಳು ಅಂದಾಗಲೂ ನೀವು ಮಾತ್ರ ಸುಮ್ಮನಿದ್ದಿರಿ. ಯಾಕಂದ್ರೆ ನಮ್ಮಿಬ್ಬರಿಗೆ ಗೊತ್ತಲ್ಲ ನಾನು ನಿಮ್ಮ ಮಗಳು ಅಂತ. ನನ್ನ ಎಲ್ಲಾ ಆಸೆಗಳಿಗೆ ಆಸರೆಯಾದವರು ನೀವು. ಕನಸುಗಳಿಗೆ ರೆಕ್ಕೆಯಾದವರು ನೀವು. ಪ್ರಶ್ನೆಗಳ ಕಣ್ಣೀರಿಗೆ ದಿಂಬಾದವರು ನೀವು. ಅತ್ತೆ, ಅಜ್ಜಿ ಎಲ್ಲಾ `ನಿನ್ನನ್ನು ನಿಮ್ಮಪ್ಪ ತೆಗೆದ್ಕೊಂಡು ಬಂದ’ ಅಂತ ಹೇಳ್ತಿದ್ದಾಗ ನೀವು ಏನೂ ಹೇಳಲಿಲ್ಲ. ಯಾಕಂದ್ರೆ ನಮ್ಮಿಬರಿಗೂ ಗೊತ್ತು ನಾನು ನಿಮ್ಮ ಮಗಳು ಅಂತ. ಬೇತಾಳ ಬೆಂಬತ್ತಿದಾಗಲೂ ವಿಕ್ರಮಾದಿತ್ಯನಷ್ಟೇ ನಿಸ್ಪೃಹನಾದ ಅಪ್ಪನ ಮಗಳು ತಾನೆ ನಾನು? ಅದನ್ನು ನೀವು ಹೇಳದಿದ್ದರೇನಂತೆ! ಪ್ರಪಂಚ ಸಿಮೆಂಟ್ ಇಟ್ಟಿಗೆಯ ಕಾಡಾದರೇನಂತೆ, ಮನುಷ್ಯ ನಿರ್ಗಂಧ ಕ್ಯಾಕ್ಟಸ್ ಆದರೇನಂತೆ ಅದರಲ್ಲೂ ಹೂವು ಹುಟ್ಟುತ್ತಿದೆಯಲ್ಲ?! ನಿಮ್ಮೆದೆಯ ಮೇಲೆ ಕಟ್ಟಿದ ಕೈ ಇಟ್ಟ್ಕೋತೀರಲ್ಲ ಅದನ್ನು ಬಿಚ್ಚಲೇಬೇಡಿ. ನನ್ನೆಲ್ಲಾ ಸ್ಟ್ರೆಂಥ್ ನಿಮ್ಮ ಕಟ್ಟಿದ ಕೈಯೊಳಗೆ. ಥ್ಯಾಂಕ್ಯೂ ಅಪ್ಪ.... ನೀವು ಅಪ್ಪ ಅಂತ ಹೇಳದೆಯೂ ನನ್ನನ್ನು ಮಗಳು ಮಾಡಿಕೊಂಡಿದ್ದಕ್ಕೆ!“ ಮತ್ತೆ ಕ್ಷಮಾ.... ಕ್ಷಮಾ..... ಮನಸೆಲ್ಲಾ ಕ್ಷಮಾಳ ಘಮ!











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ