ಮಂಗಳವಾರ, ಮೇ 10, 2011

ಸಾಯಿಬಾಬಾರ ಧರ್ಮಾರ್ಥಗಳು ಪ್ರಜಾತಂತ್ರದ ಅಣಕವಲ್ಲವೇ?




- ಶಿವಸುಂದರ್



ದೈವಮಾನವ, ನಡೆದಾಡುವ ದೇವರು, ದೈವಾಂಶ ಸಂಭೂತ ಇತ್ಯಾದಿ ಅಲಂಕಾರಗಳಿಂದ ಪ್ರಭುತ್ವ ಮತ್ತು ಸಮಾಜ ಕೊಂಡಾಡುತ್ತಿದ್ದ ಸಾಯಿಬಾಬಾನಂಥ ಸಾಯಿಬಾಬಾ ಸಹ ಮೃತರಾಗಿದ್ದಾರೆ. ಸಾಯುವ ಮುನ್ನ ಸಾಮಾನ್ಯ ನರಮಾನವರಂತೆ ೨೮ಕ್ಕೂ ಹೆಚ್ಚು ದಿನಗಳ ಕಾಲ ಹಲವಾರು ಖಾಯಿಲೆಗಳಿಂದ ನರಳಿದ್ದಾರೆ. ತಮ್ಮಲ್ಲೇ ಸರ್ವರೋಗನಿವಾರಿಣಿ ಬೂದಿಯಿದ್ದರೂ ಅವೇನೂ ದೇವಮಾನವನ ಸಾವನ್ನೂ ತಡೆಯಲಿಲ್ಲ ನೋವನ್ನೂ ಕಡಿಮೆ ಮಾಡಲಿಲ್ಲ. ಬದಲಿಗೆ ಹಗಲು ರಾತ್ರಿ ಶ್ರಮಿಸಿ ಆ ನಿರ್ಜೀವ ದೇಹವನ್ನು ಏಪ್ರಿಲ್ ೨೪ರ ತನಕ ಉಳಿಸಲು ಹರಸಾಹಸ ಪಟ್ಟಿದ್ದು ಅಮೆರಿಕ ಹಾಗೂ ಭಾರತದ ಅತ್ಯುತ್ತಮ ವೈದ್ಯರುಗಳು! ಹಾಗೆ ನೋಡಿದರೆ ಇದೇ ಸಾಯಿಬಾಬಾ ವಿದೇಶಿ ಸಂಘಸಂಸ್ಥೆಗಳ ಅಪಾರ ಧನಸಹಾಯದೊಂಡಿಗೆ ಕಟ್ಟಿದ್ದ ಆಸ್ಪತ್ರೆಗಳಲ್ಲಿ ಕೊಡುತ್ತಿದ್ದದ್ದು ಸಾಯಿಬಾಬಾ ಮಂತ್ರಿಸಿದ ಬೂದಿಯನ್ನೇನಲ್ಲ. ವೈಜ್ನಾನಿಕ ವಿಧಾನದಿಂದ ಅನ್ವೇಷಿತವಾದ ಔಷದಿಗಳನ್ನೇ. ಈ ಆಸ್ಪತ್ರೆಯ ಸಹಾಯದಿಂದ ಸಾಕಷ್ಟು ಜನರು ಉಪಯೋಗ ಪಡೆದುಕೊಂಡಿದ್ದು ನಿಜ. ಆದರೆ ವಿಪರ್ಯಾಸವೇನೆಂದರೆ ಸಾಯಿಬಾಬಾರ ಸಾವು, ಆಧುನಿಕ ವೈದ್ಯಕೀಯ ಸೇವೆ ಇವೆಲ್ಲವೂ ಸಾರಾಂಶದಲ್ಲಿ ಸಾಯಿಬಾಬಾ ಜೀವನದುದ್ದಕ್ಕೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಚಾರ ಮಾಡಿದ ಮೌಢ್ಯಗಳನ್ನೇನೂ ಅಲುಗಾಡಿಸುತ್ತಿಲ್ಲ. ಬದಲಿಗೆ ಕಷ್ಟಕಾಲದಲ್ಲಿ ಬಡಜನತೆಗೆ ಒದಗಿಬಂದ ಸಹಾಯ ಅವರಲ್ಲಿ ಋಣೀ ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದು ಅವರಲ್ಲಿ ಸಾಯಿಬಾಬಾರ ದೈವತ್ವದ ಬಗ್ಗೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಇದು ಸಾಯಿಬಾಬಾರನ್ನು ಮರಣಾನಂತರವೂ ಸಹ ಪವಾಡ ಪುರುಷನನ್ನಾಗಿ ಸ್ಥಾಪಿಸುತ್ತಿದೆ. ಮತ್ತು ಒಂದು ಪ್ರಜಾತಂತ್ರದಲ್ಲಿಯೂ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಪವಾಡಗಳನ್ನೋ ಅಥವಾ ಪವಾಡ ಪುರುಷರನ್ನೋ ಆಶ್ರಯಿಸುವಂತೆ ಮಾಡುತ್ತದೆ. ಹೀಗಾಗಿ ಸಾಯಿಬಾಬಾರ ವೈಭವೀಕರಣ ಸಾರಾಂಶದಲ್ಲಿ ಪ್ರಜಾತಂತ್ರದ ವೈಫಲ್ಯದ ವೈಭವೀಕರಣವೇ ಆಗಿದೆ.

ಸಾಯಿಬಾಬಾರ ಬದುಕು ಮತ್ತು ಅವರ ಬದುಕಿನ ಏರುಗತಿ ನಮ್ಮ ದೇಶದ ಪ್ರಜಾಸತ್ತೆ ಮತ್ತು ಜನತೆಯ ಬದುಕಿನ ಅವನತಿಯ ಜೊತೆಜೊತೆಗೆ ನೇರವಾಗಿ ಸಂಬಂಧಿಸಿದೆ. ಪ್ರಾರಂಭದಲ್ಲಿ ಸಾಯಿಬಾಬಾ ಮೂರನೇ ದರ್ಜೆ ತಂತ್ರಗಳನ್ನು ಬಳಸಿ, ಬೂದಿ, ಉಂಗುರುಗಳನ್ನು "ಶೂನ್ಯದಿಂದ ಸೃಷ್ಟಿಸಿ" ಕೊಡುವ ಕಳಪೆ ಕಣ್ಕಟ್ಟುಗಳನ್ನು ಮಾಡುತ್ತಾ ಪವಾಡ ಪುರುಷರ ಸ್ಥಾನ ಗಿಟ್ಟಿಸಿಕೊಂಡರು. ಈ ದೇಶದ ಸಾಮಾಜಿಕ ಪರಿಸ್ಥಿತಿ ಮತ್ತು ದಮನಿತ ಜನರ ದೈನೇಸಿ ಪರಿಸ್ಥಿತಿಗಳು ಬಾಬಾಗಳ ಬುರುಡೆಯನ್ನು ಪ್ರಶ್ನಿಸುವ ಮನಸ್ಥಿತಿಗಿಂತಾ ಅದನ್ನು ಒಪ್ಪಿಕೊಂಡು ಅದರ ಮೂಲಕ ತಮ್ಮ ತೀರದ ಬವಣೆಗಳಿಗೆ ಭ್ರಾಮಕ ಪರಿಹಾರವನ್ನು ಕಂಡುಕೊಳ್ಳುವ ಶರಣಾಗತಿಯ ಮನೋಭಾವವನ್ನೇ ಮುಂದುವರೆಸಿತ್ತು. ಬೇರೇ ಯಾವುದೇ ದೇಶಗಳಿಗಿಂತ ಈ ದೇಶದಲ್ಲಿ ಧರ್ಮ ಮತ್ತು ಜಾತಿ ವ್ಯವಸ್ಥೆಗಳಂಥಾ ವ್ಯವಸ್ಥಿತ ಆಕ್ರಮಣಗಳು ದಮನಿತ ಜನತೆಯಲ್ಲಿ ತಮ್ಮ ಶೊಚನೀಯ ಪರಿಸ್ಥಿತಿಗೆ ಕಾರಣಗಳನ್ನು ವ್ಯವಸ್ಥೆಯಲ್ಲಿ ಹುಡುಕುವುದಕ್ಕಿಂತಾ ತಮ್ಮ ಪೂರ್ವಜನ್ಮದ ಪಾಪ ಕರ್ಮಗಳಲ್ಲೇ ಹುಡುಕಿಕೊಳ್ಳುವಂಥಾ ಆತ್ಮಘಾತುಕ ಮನಸ್ಥಿತಿಯನ್ನು ಪೋಷಿಸಿಕೊಂಡು ಬಂದಿವೆ. ಹೀಗಾಗಿಯೇ ಈ ದೇಶದ ದಮನಿತ ಮತ್ತು ಬಡಜನರಲ್ಲಿ ತಮ್ಮ ಬಗ್ಗೆ ತಮಗೆ ಆತ್ಮವಿಶ್ವಾಸ ಇರುವುದಕ್ಕಿಂತ ಪವಾಡ ಪುರುಷರ ಬಗ್ಗೆ, ದೇವೀ ಮಾನವರ ಬಗ್ಗೆ ನಂಬಿಕೆ, ಮೂಢ ನಂಬಿಕೆ ಹೆಚ್ಚು. ಈ ಮೂಢ ನಂಬಿಕೆಯ ಮೂಲ ಅವರ ಅಸಹಾಯಕತೆಯನ್ನು ಹೆಚ್ಚಿಸುವ ತಮ್ಮ ನಿಯಂತ್ರಣದಲ್ಲಿಲ್ಲದ ಶೋಷಕ ವ್ಯವಸ್ಥೆಯಲ್ಲಿದೆ.

ವಾಸ್ತವವಾಗಿ ಒಂದು ಪ್ರಜಾತಂತ್ರ ಜನರ ಈ ನಿಸ್ಸಹಾಯತೆಯನ್ನು ದೂರ ಮಾಡಿ ಜನತೆಗೆ ತಮ್ಮ ಸಂಘಟಿತ ಶಕ್ತಿಯ ಮೇಲೆ ತಮಗೇ ನಂಬಿಕೆ ಬರುವಂತೆ ಮಾಡಬೇಕಿತ್ತು. ಇದುವರೆಗೆ ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಬಂದ ಸಮಾಜ ಮತ್ತು ಜನರಲ್ಲಿ ಪ್ರಶ್ನಿಸುವ ಮತ್ತು ಸ್ವೀಕ್ರುತ ಗ್ರಹಿಕೆಗಳನ್ನು ಅನುಮಾನಿಸುವ ವಿಚಾರವಾದಿ ಮನೋಧರ್ಮವನ್ನು ಹುಟ್ಟುಹಾಕಬೇಕಿತ್ತು. ಒಂದು ಪ್ರಜಾತಂತ್ರ ಜನರಿಗೆ ತಮ್ಮ ಬದಿಕಿನ ಆಗುಹೋಗುಗಳ ಮೇಲೆ ತಮಗೇ ನಿಯಂತ್ರಣ ಇರುವಂತ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನೀಡಿದ್ದಿದ್ದರೆ ಹಾಗೂ ವೈಜ್ನಾನಿಕ ಮುಭಾವವನ್ನು ಹುಟ್ಟುಹಾಕುವಂಥಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದರೆ ಜನರಲ್ಲಿ ಪರಾವಲಂಬಿ ಮನೋಭಾವವೇ ಹುಟ್ಟುತ್ತಿರಲಿಲ್ಲ. ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಇರುವ ಸಮಾಜ ನಿರ್ಮಾಣವಾಗಿದ್ದರೆ ಈ ದೇಶದಲ್ಲಿ ಬಾಬಾಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ.

ಆದರೆ ನಮ್ಮ ಪ್ರಜಾತಂತ್ರಕ್ಕೆ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಅಜೆಂಡಾವೇ ಇರಲಿಲ್ಲ. ಬಡತನದ ಮತ್ತು ಪರಾವಲಂಬನೆಯ ಮುಂದುವರೆಸುವುದು ಈ ದೇಶದ ಆಳುವವರ್ಗಗಳ ಪಟ್ಟಭದ್ರ ಹಿತಾಸಕ್ತಿಯೂ ಆಗಿದ್ದರಿಂದ ಈ ದೇಶದ ಜನತೆಯ ನಿಸ್ಸಹಾಯಕ ಪರಾವಲಂಬನೆ ಹಾಗೆಯೇ ಮುಂದುವರೆದು ಬಾಬಾಗಳ ಹುಟ್ಟಿಗೆ ಭೂಮಿಕೆಯನ್ನು ಸೃಷ್ಟಿಸಿತ್ತು. ಈ ಸಾಮಾಜಿಕ ಸಂದರ್ಭದ ಮನೋಭೂಮಿಕೆಯೇ ಪವಾಡಗಳನ್ನು ನಂಬುವ, ಹಂಬಲಿಸುವ ಮಾನಸಿಕತೆಯನ್ನು ಹುಟ್ಟುಹಾಕಿತು. ಇದರ ಪ್ರಯೋಜನವನ್ನು ಮಾಡಿಕೊಂಡು ಸಾಯಿಬಾಬಾಗಳಂಥವರು ಜನರನ್ನು ಹಿಂಬಾಲಕರನ್ನಾಗಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಸಾಯಿಬಾಬಾ ವ್ಯಕ್ತಿಯಾಗದೇ ಜನರ ವಿಶ್ವಾಸವನ್ನು ಗಳಿಸಿಕೊಂಡ ಶಕ್ತಿಕೇಂದ್ರವಾಗುತ್ತಿದ್ದಂತೆ ಆಳುವ ವರ್ಗ ಮತ್ತು ಪ್ರಭುತ್ವಗಳು ಸಹ ಯೋಜಿತವಾಗಿ ಸಾಯಿಬಾಬಾರನ್ನು ವಿಶ್ವಮಾನ್ಯ ಆಧ್ಯಾತ್ಮಿಕ ಗುರುವನ್ನಾಗಿ ಪ್ರವರ್ಧಮಾನಕ್ಕೆ ತಂದರು. ಸಾಯಿಬಾಬಾರ ವರ್ಗಾತೀತ ಸಂಘರ್ಷ ರಹಿತ ಮಾನವತೆ, ದಾನ-ಧರ್ಮಗಳ ಮುಸುಕಿನಲ್ಲಿ ಎಲ್ಲಾ ವ್ಯವಸ್ಥಿತ ಶೋಷಣೆ,ಲೂಟಿಗಳಿಗೆ ಪಾರಮಾರ್ಥಿಕ ಮಾನ್ಯತೆಗಳನ್ನು ಗಳಿಸಿಕೊಂಡರು. ಹಾಗೂ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಹಲವು ಲೌಕಿಕ ದಂಧೆಗಳಿಗೆ ಸಾಯಿಬಾಬಾ ಸಂಸ್ಥೆ ಅಲೌಕಿಕ ಮುಸುಕನ್ನು ಒದಗಿಸಿಕೊಡುವ ಸಂಸ್ಥೆಯಾಗಿಯೂ ಬಳಕೆಯಾಯಿತು.

ಆದರೆ ೮೦ರ ದಶಕದಲ್ಲಿ ಸ್ವಶ್ರಮ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೌಲ್ಯಗಳು ಜೀವಂತವಾಗಿದ್ದ ಸಂದರ್ಭದಲ್ಲು ಹುಟ್ಟುಕೊಂಡಿದ್ದ ಮಧ್ಯಮವರ್ಗ ಈ ಮೌಢ್ಯಗಳ ಬೇರುಗನ್ನು ಪ್ರಶ್ನಿಸದಿದ್ದರೂ ಒಟ್ಟಾರೆಯಾಗಿ ಸಾಯಿಬಾಬಾರ ಹಿಂದಿದ್ದ ಪ್ರಭಾವಲಯವನ್ನು ಪ್ರಶ್ನಿಸುತ್ತಲೇ ಬಯಲುಗೊಳಿಸುತ್ತಾ ಬಂದರು. ಉಂಗುರ ಕೊಡುವ ಸಾಯಿಬಾಬಾ ಕುಂಬಲಕಾಯಿ ಏಕೆ ಕೊಡಲು ಸಾಧ್ಯವಿಲ್ಲ, ಶೂನ್ಯದಲ್ಲೇ ಎಲ್ಲಾ ಸೃಷ್ಟಿಸಲು ಸಾಧ್ಯವಿದ್ದರೆ ಸಮುದ್ರದಲ್ಲಿ ಬೆರಳದ್ದಿ ಪೆಟ್ರೋಲು ಮಾಡಿಬಿಟ್ಟರೆ ದೇಶದ ಹಲವು ಕಷ್ಟಗಳು ತೀರುತ್ತದಲ್ಲ ಎಂಬ ಕೋವೂರ್, ಹೆಚ್. ನರಸಿಂಹಯ್ಯ ಇನಿತರರ ವಾದ ಸಮಾಜದಲ್ಲಿ ಸಾಯಿಬಾಬಾರ ಬಗ್ಗೆ ಪ್ರಶ್ನೆಗಳನ್ನು ಹುಟ್ಟೂಹಾಕಿತು. ಅದೇ ಸಮಯದಲ್ಲಿ ಸಾಯಿಬಾಬಾ ಆಶ್ರಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ನಾಲ್ಕು ಕೂಲೆಗಳೂ ಸಹ ಸಾಯಿಬಾಬಾರ ಪ್ತಭಾವಲಯವು ವಿಸ್ತರಿಸುವುದಕ್ಕೆ ಅಡ್ಡಿಯಾಯಿತು.

ಆದರೆ ೧೯೯೧ರ ಜಾಗತೀಕರಣದ ನೀತಿಗಳು ಈ ದೇಶದ ಪ್ರಜಾತಂತ್ರ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಆಶಯದ ಮೂಲಕ್ಕೆ ಕೊಡಲಿಪೆಟ್ಟು ಹಾಕಿದವು. ಅದು ಈವರೆಗೆ ಜನರಿಗೆ ಜವಾಬುದಾರರಾಗಿರಬೇಕಾದ ಸರ್ಕಾರವನ್ನು ಸ್ಥಳಾಂತರಿಸಿ ಅದರಲ್ಲಿ ಜನರ ನೇರ ನಿಯಂತ್ರಣಕ್ಕೆ ಒಳಪಡದ, ಬಲವಿದ್ದವರು ಮಾತ್ರ ಬದುಕಬಹುದಾದ ಮಾರುಕಟ್ಟೆಯೆಂಬ ಕಸಾಯಿಖಾನೆಗೆ ಜನರನ್ನು ದೂಡಿತು. ಇದರಿಂದ ಜನರ ಅತಂತ್ರತೆ ಇನ್ನಷ್ಟು ಹೆಚ್ಚಾಗಿ ಪರಾವಲಂಬೀ ಮನೋಭಾವ ಇನ್ನಷ್ಟು ಬೇರುಬಿಡುವಂತಾಯಿತು. ಕಷ್ಟಪಟ್ಟು ಒಂದೊಂದೇ ಹನಿಯನ್ನು ಶೇಖರಿಸಿ ರೂಪುಗೊಂಡ ಮಧ್ಯಮವರ್ಗಕ್ಕಿಂತ ಜಾಗತೀಕರಣದಿಂದ ಮತ್ತು ಮಾರುಕಟ್ಟೆ ನೀತಿಯಿಂದ ದಿಢೀರ್ ಸಂಪನ್ನರಾದ ಒಂದು ನವ ಶ್ರೀಮಂತ ವರ್ಗ ಈ ಕಾಲಘಟ್ಟದಲ್ಲಿ ಉದಯವಾಯಿತು. ಈ ನವ ಮೇಲ್‌ಮಧ್ಯಮ ವರ್ಗದ ಸುಸಂಪನ್ನತೆಗೆ ಅದರ ಶ್ರಮಕ್ಕಿಂತ,ಪ್ರತಿಭೆಗಿಂತ ಮಾರುಕಟ್ಟೆಯ ಒಲವೇ ಕಾರಣವಾದ್ದರಿಂದ ಈ ನವ ಮಧ್ಯಮವರ್ಗದಲ್ಲಿ ವೈಚಾರಿಕತೆ, ವೈಜ್ನಾನಿಕತೆಗಿಂತ ಹೆಚ್ಚಾಗಿ ಅದೃಷ್ಟದಲ್ಲಿ, ಮಾರುಕಟ್ಟೆಯ ಆಶಿರ್ವಾದದಲ್ಲಿ, ಅದನ್ನು ದೊರಕಿಸಿಕೊಡಬಹುದಾದ ಅತಿಮಾನವರಲ್ಲಿ ನಂಬಿಕೆ ಇಡುವುದು ಒಂದು ಮೌಲ್ಯವೂ ಜೀವನ ಶೈಲಿಯೂ ಆಯಿತು. ಇಂದಿಗೂ ನಗರಗಳಲ್ಲಿ ಸಾಯಿಬಾಬಾನ ಭಕ್ತರು ಈ ನವ ಶ್ರಿಮಂತರೇ ಆಗಿರುತ್ತಾರೆ. ಮತ್ತು ಅವರ ಜೀವನ ದೃಷ್ಟಿ ಬಹುಮಾಡಿ ಪ್ರಜಾತಂತ್ರ ವಿರೋಧಿ ಮಾರುಕಟ್ಟೆ ಪರ ವಕ್ತಾರಿಕೆಯೇ ಆಗಿರುತ್ತದೆ. ಆಧಾತ್ಮಿಕವಾಗಿ ಮಾನವಾತೀತ ಶಕ್ತಿಗಳ ಎದುರು ಶರಣಾಗುವುದೇ ಈ ವರ್ಗದ ಆಧ್ತಾತ್ಮಿಕ ಮೌಲ್ಯವೂ ಆಗಿರುತ್ತದೆ. ಈ ವರ್ಗ ಈ ಕಾಲಘಟ್ಟದಲ್ಲಿ ಸಮಾಜದಲ್ಲಿ ನೇತಾರಿಕೆಯ ಮತ್ತು ವಕ್ತಾರಿಕೆಯ ಸ್ಥಾನವನ್ನೂ ಪಡೆದ್ದರಿಂದಲೇ ಪವಾಡಗಳ ಬಯಲಿಂದ ಮಂಕಾಗಿದ್ದ ಸಾಯಿಬಾಬಾ ಮತ್ತೆ ದೇವಮಾನವರ ಸ್ಥಾನಕ್ಕೆ ಪರ್ಯಾಯ ಸರ್ಕಾರದ ಸ್ಥಾನಕ್ಕೆ ಏರಿದ್ದು.

ಆದರೆ ಅದೇ ಸಮಯದಲ್ಲಿ ಸರ್ಕಾರ ಶಿಕ್ಷಣ, ಆರೋಗ್ಯ ಇನ್ನಿತರ ಜನತೆಯ ಅತ್ಯಗತ್ಯ ಕ್ಷೇತ್ರಗಳಿಂದ ಹಿಂದೆ ಸರಿಯುತ್ತಿತ್ತು. ಸಾಯಿಬಾಬಾ ತಮ್ಮ ಟ್ರಸ್ಟ್ ಮೂಲಕ ಕುಡಿಯುವ ನೀರು ಮತ್ತು ಹೈಟೆಕ್ ಆಸ್ಪತ್ರೆಯ ಸೌಲಭ್ಯವನ್ನು ಬಡಜನರಿಗೂ ವಿಸ್ತರಿಸಿ ಸರ್ಕಾರದಿಂದ ವಂಚಿತಗೊಂಡು ಕಂಗಾಲಾಗಿದ್ದ ಜನರ ಕಣ್ಣಲಿ ನಡೆದಾಡುವ ದೇವರೇ ಆಗಿಬಿಟ್ಟರು. ಆದರೆ ಈ ಆಸ್ಪತ್ರೆ ಮತ್ತು ಶಿಕ್ಷಣವನ್ನು ದೊರಕಿಸಲು ಬೇಕಾಗಿದ್ದ ಸಂಪನ್ಮೂಲ ಸಾಯಿಬಾಬಾ ಸಂಸ್ಥೆ ಪಡೆದುಕೊಂಡಿದ್ದು ಹೇಗೆ? ಅಷ್ಟು ಹಣ ಒಂದು ಸರ್ಕಾರದ ಬಳಿ ಇರುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಯಾರೂ ಕೇಳದೇ ಸಾಯಿಬಾಬಾರ ಸಮಾಜ ಸೇವೆಯನ್ನು ವಾಚಾಮಗೋಚರವಾಗಿ ಹೊಗಳಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಸಾಯಿಬಾಬಾ ನಿಧನದ ನಂತರ ಅವರ ಪವಾಡ ಇತ್ಯಾದಿಗಳ ೧೯೯೧ರ ಪೂರ್ವಾಶ್ರಮದ ಅವತಾರವನ್ನು ಖಂಡಿಸಿದ ಕೆಲವೇ ಕೆಲವು ಮಾಧ್ಯಮಗಳೂ ಸಹ ನಂತರದಲ್ಲಿ ಅವರು ಮಾಡಿದ ಕುಡಿಯುವ ನೀರಿನ ಯೋಜನೆ ಮತ್ತು ಒದಗಿಸಿದ ಆಸ್ಪತ್ರೆ ಸೌಲಭ್ಯಗಳೇ ನಿಜವಾದ ಪವಾಡ, ಅವರ ಜಾತ್ಯತೀತ ಮಾನವೀಯತೆ ಇವೆಲ್ಲವೂ ಹೆಚ್ಚೂ ಕಡಿಮೆ ಅವರು ದೇವಮಾನವನಿಗೆ ಸಮ ಎಂಬುದನ್ನು ರುಜುವಾತು ಮಾಡುತ್ತದೆ ಎಂದು ಬರೆಯುತ್ತಿವೆ. ಇನ್ನುಳಿದ ಮಾಧ್ಯಮಗಳಂತೂ ಸಾಯಿಬಾಬಾ ಸಾಮಾನ್ಯ ಮನುಷ್ಯರಂತೆ ಸತ್ತರೂ ಈ ಕಾಲದಲ್ಲೂ ಆತ ದೈವಾಂಶ ಸಂಭೂತ ಮತ್ತೆ ಆತ ಪುನರ್ಜನ್ಮ ಎತ್ತುತ್ತಾನೆ ಎನ್ನುವಂತೆಯೇ ಬಿತ್ತರಿಸುತ್ತಿವೆ. ಅದೇ ರೀತಿ ಪ್ರಭುತ್ವವೂ ಸಹ ಸಾಯಿಬಾಬಾರನ್ನು ದೈವೀ ಮಾನವ ಮತ್ತು ಜನತೆಯಿಂದ ಆಯ್ಕೆಯಾದ ಸರ್ಕಾರಕ್ಕೆ ಪರ್ಯಾಯವಾದ ಮತ್ತು ಅದಕ್ಕಿಂತಲೂ ಮಿಗಿಲಾದ ಆಧಾvಕ ಮತ್ತು ಸಾಮಾಜಿಕ ಶಕ್ತಿ ಕೇಂದ್ರವೆಂದು ಅಧಿಕೃತವಾದ ಮಾನ್ಯತೆ ನೀಡುತ್ತಿದೆ.

ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ. ಇದು ಪ್ರಭುತ್ವ ಜನರ ಕಲ್ಯಾಣ ಕಾರ್ಯಕ್ರಮಗಳಿಂದ ಹಿಂತೆಗೆಯುವುದನ್ನು, ಜನರಲ್ಲಿ ತಮಗಿಂತ ಹೆಚ್ಚಾಗಿ ಮಾನವಾತೀತ ಶಕ್ತಿಗಳಲ್ಲಿ ನಂಬಿಕೆ ಇಡುವುದನ್ನು, ಸ್ವ ಶ್ರಮ ಮತ್ತು ಸ್ವಾವಲಂಬನೆಗಳಿಗಿಂತ ಅದೃಷ್ಟ ಮತ್ತು ಪವಾಡಗಳಲ್ಲಿ ನಂಬಿಕೆ ಇಡುವಂಥ ವ್ಯವಸ್ಥೆಯನ್ನು ಪೋಷಿಸುವ ಅತ್ಯಂತ ಪ್ರಜಾತಂತ್ರ ವಿರೋಧಿ ಮಾನಸಿಕತೆಯನ್ನು ಪೋಷಿಸುವ ಮತ್ತು ಸಾಂಸ್ಥೀಕರಿಸುವ ಹುನ್ನಾರ ಇದರಲ್ಲಡಗಿದೆ. ಸಹಾಯ ಮಾಡಿದವರನ್ನು ನೆನೆಯುವ ಜನಸಾಮಾನ್ಯರ ಸಹಜ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸ್ಥೆ ಈ ಸಂದರ್ಭದಲ್ಲಿ ಜನರನ್ನು ಶಾಶ್ವತವಾಗಿ ದೈನೇಸಿಗಳನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಜನರ ಪ್ರಶ್ನಿಸುವ ಮನೋಭಾವವನ್ನೇ ಚಿವುಟಿಹಾಕುವ ಯತ್ನದಲ್ಲಿದೆ.

""Why People believe in wierd things" " ಎಂಬ (ಜನರೇಕೆ ಅಸಂಗತ ವಿಷಯಗಳಲ್ಲಿ ನಂಬಿಕೆ ಇಡುತ್ತಾರೆ?) ಪುಸ್ತಕಕ್ಕೆ ಮುನ್ನುಡಿ ನರೆಯುತ್ತಾ ಅಮೆರಿಕದ ಪ್ರಖ್ಯಾತ ವಿಚಾರವಾದಿ ಸ್ಟೀಫನ್ ಜೇ ಗೌಲ್ಡ್ ಎಂಬುವರು

"Skepticism is the agent of reason against organized irrationalism—and is therefore one of the keys to human and social decency" ಎಂದು ಹೇಳುತ್ತಾರೆ. ಅಂದರೆ "ಅನುಮಾನಿಸುವುದು ಸಂಘಟಿತ ಮೌಢ್ಯದ ವಿರುದ್ಧ ವಿಚಾರವಾದದ ಉಪಕರಣವಾಗಿರುತ್ತದೆ. ಆದ್ದರಿಂದಲೇ ಅದು ಮಾನವೀಯ ಮತ್ತು ಸಾಮಾಜಿಕ ಆರೋಗ್ಯವನ್ನು ಸಾಧಿಸಲು ಒಂದು ಪ್ರಮುಖ ಸಾಧನವೂ ಆಗುತ್ತದೆ" ಎಂದು ಹೇಳುತ್ತಾರೆ. ಸಾಯಿಬಾಬಾರಂಥ ಸಂಘಟಿತ ಮೌಢ್ಯದ ವಿರುದ್ಧ ಎಲ್ಲಿಯೂ ಒಂದು ಅನುಮಾನದ ಎಳೆಯೂ ಕಾಣದಿರುವುದು ನಮ್ಮ ಪ್ರಜಾತಂತ್ರ ಎಷ್ಟು ಅನಾರೋಗ್ಯವಾಗಿದೆ ಎಂಬುದರ ಸಂಕೇತವಾಗಿಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ