ಮೊನ್ನೆ,
ಮತ್ತೆ ಅದೇ ಬೀದಿಯಲ್ಲಿ ಹೋಗಿದ್ದೆ
’ಆನಾ’ಳ ಸುತ್ತ ನೂರಾರು,
ಸಾವಿರಾರು ಕವನ ಕುತೂಹಲಿಗಳು
ಆಕೆ ಕವಿತೆ ಬರೆದು ಹಂಚುತ್ತಿದ್ದಾಳೆ
.
ಒಬ್ಬಾತ ನಿಂತ ನಿಲುವಿನಲ್ಲೆ
ನಿನ್ನನ್ನು ಪ್ರೀತಿಸುತ್ತೇನೆ ಎಂದ
ಎಷ್ಟೆಂದರೆ, ನೀನು ಕವಿತೆಯನ್ನು ಪ್ರೀತಿಸುವಷ್ಟು
ಸಾಮ್ರಾಜ್ಯವನ್ನು ದ್ವೇಷಿಸುವಷ್ಟು
ಒಬ್ಬಾಕೆ ಅಂಗಲಾಚುತ್ತಾಳೆ
ನನ್ನ ಮಗನನ್ನು ಕಳುಹಿಸಿಕೊಡು
ಮರಣಶಯ್ಯೆಯಲ್ಲಿರುವ ಮಗನಿಗೆ
ನಿನ್ನ ಕವಿತೆಯ ಗುಟುಕು ಬೇಕು
ಸಾವನ್ನು ಜಯಿಸಲು
ಒಂದು ಸಾಲು ಸಾಕು
ಕವಿಮಿತ್ರರು ಕರೆಯುತ್ತಾರೆ
ಅವಸರವಿದೆ ಬೇಗ ಬಾ
ಸಾಮ್ರಾಜ್ಯದ ಕರೆಗೆ
ನಿಂತ ನೆಲ ನಡುಗುತಿದೆ
ಹುಚ್ಚಿಯಂತೆ ತಿರುಕಿಯಂತೆ
ವ್ಯರ್ಥವಾಗಬೇಡ
ಆನಾ ನಿಜಕ್ಕೂ ಹುಚ್ಚಿಯೇ
ಆಗುತ್ತಾಳೆ
ಸಾವಿನ ತೆಕ್ಕೆಯಲ್ಲಿರುವ ನೆಲದ ಮಕ್ಕಳಿಗೆ
ಕೊನೆಯ ಕವಿತೆ ಓದುತ್ತಾಳೆ
ಅವರಿಗೆಲ್ಲ ಸಂತೃಪ್ತಿಯ ಸಾವು
ಅವಳಿಗೆ ಅಮರತ್ವ
* * *
ನನಗೆ ಏನೂ ಕೇಳಬೇಕು ಅನ್ನಿಸಲಿಲ್ಲ
ಮತ್ತೆ ಬರುತ್ತೇನೆ ಎಂದು ಬಂದುಬಿಟ್ಟೆ
ಪ್ರತಿಸಲವೂ ಹೀಗೇ ಆಗುತ್ತಿದೆ
ಏನೋ ಕೇಳಬೇಕು ಅನ್ನಿಸಿ
ಆ ಬೀದಿಯಲ್ಲಿ ಹೋಗುತ್ತೇನೆ
ಕೇಳಬೇಕಿರುವುದನ್ನು ಹಾಗೇ ಉಳಿಸಿಕೊಂಡು
ಬಂದು ಬಿಡುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ