ಬುಧವಾರ, ಜುಲೈ 20, 2011

ಫೈಜ್ ಕವಿತೆಗಳು

ಸೆರೆಮನೆಯಲ್ಲೊಂದು ಸಂಜೆ


ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ
ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ.
ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ
ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ.
ಅಂಗಳದಲಿ ನಿಂತ ನಿರಾಶ್ರಿತ ಮರಗಳು
ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.
ಚಾವಣಿಯ ಮೇಲೆ ಮೆರುಗುತ್ತಿವೆ
ಬೆಳದಿಂಗಳ ಕರುಣೆಯ ಬೆರಳು.
ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು
ನೀಲಿ ಕದಡಿದೆ ಆಗಸದ ತುಂಬಾ.
ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು,
ಆವರಿಸಿದಂತೆ ಮನಸ
ಸ್ವಲ್ಪ ಸ್ವಲ್ಪವೇ ವಿರಹದ ನೋವು.
ಆಹಾ! ಎಷ್ಟು ಸಿಹಿ ಈ ಗಳಿಗೆ.
ಗೆಲ್ಲಲಾರದು ಇಂದು ಎಂದೆಂದೂ
ಇಲ್ಲಿ ವಿಷವ ಬೆರೆಸುವ ಮನಸು.
ಮಿಲನದ ಮನೆಯ ದೀಪ
ಆರಿಸಿಯಾರು ಬಿಡಿ.
ಚಂದ್ರನನ್ನಳಿಸುವವರು
ಯಾರಾದರೂ ಇದ್ದರೆ ಹೇಳಿ.

ಸೆರೆಮನೆಯಲ್ಲೊಂದು ಬೆಳಗು 


ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’
ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು.
‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ
ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.
ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ.
ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ  ಮೇಲೆ
ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ.
ಚಂದ್ರನ ಕೈಯ್ಯಿಂದ ಉದುರುತ್ತಿವೆ
ಒಂದೊಂದೆ ತಾರೆ ತಾವರೆಯ ಪಕಳೆಗಳು.
ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ
ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ  ಹೊತ್ತು.
ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ
ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ.
ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ
ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು.
ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು.
ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ.
ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ.
ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ.
ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು.
ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ.
ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ.
ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು.
ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ  ಇನ್ನೆಲ್ಲೋ.
ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ  ವೈರಿಗಳು.
ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು,
ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ
ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.
ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು
ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .

   Tr :    Bageshree

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ