ಬುಧವಾರ, ಜುಲೈ 20, 2011
ಯಾರು ಬಿಟ್ಟು ಹೋದ ಚಿಹ್ನೆಗಳು
ಕಡಲಿಗೆ ಬಿದ್ದ ಕಣ್ಣ ನೀಲಿ
ಸಮುದ್ರವಾಯಿತೇ-
ಮಿಲಿಯಾಂತರ ಉಲ್ಕಾಪಾತಗಳ
ಕೊಲೆಯಾಗಿ ಸಮುದ್ರ ತುಂಬಿಹೋಯಿತೆ-
ನಮ್ಮೂರ ಗಿಡ ಮರ, ಕೆರೆ ಕುಂಟೆ,
ಬೆಟ್ಟ ಗುಡ್ಡ, ಭೂಮಿ ಆಕಾಶ
ಬ್ರಹ್ಮಾಂಡ-
ಕಣ್ಣ ನೀಲಿಯೊಳಗೆ ಸೇರಿಕೊಂಡಿದ್ದೇಗೇ?
ಭೂಮಿಗೆ ಬೆಂಕಿ ಬಿದ್ದಾಗೆಲ್ಲ
ಓಡಿ ಬರುವ ಕಡಲು-
ಸೂರ್ಯನಿಂದ ಬೆಳಕು ತಂದು
ಮಣ್ಣಿನಿಂದ ಕಪ್ಪು ಆಮೈನೊ ಆಸಿಡ್
ತಿಂದು ನೇಯ್ದುಕೊಂಡಿದ್ದೇಗೆ
ತನ್ನ ಸುತ್ತಲ ಜೀವಜಾಲ-
ಕೋರಲ್ ಬಣ್ಣಗಳ, ಮೀನ ಕಣ್ಣುಗಳ
ಆಕಾಶ ಕಾಯಗಳ ಗುರುತ್ವಕ್ಕೆ
ತಕಥೈ ಥೈತಕ ಕುಣಿಯುವ
ಸಮುದ್ರದ ಅಲೆಗಳ ಮೇಲೆ-
ನೀಲಿ ರಥಗಳಲ್ಲಿ ಹೋಗಿ ಬರುವವರು
ಯಾರು? ದೇವಲೋಕಕ್ಕೆ-
ಇಲ್ಲಿದ್ದವರೆಲ್ಲ ಎಲ್ಲಿಗೆ ಹೋಗವರು
ಇಲ್ಲಿಗೆ ಬಂದವರೆಲ್ಲ ಎಲ್ಲಿದ್ದವರು-
ಗಿಡ ಮರ, ಕೆರೆ ಕುಂಟೆ, ಬೆಟ್ಟ ಗುಡ್ಡ;
ಬಸ್ಸು ಕಾರು ರೈಲು ವಿಮಾನಗಳೆಲ್ಲ
ಯಾರು ಬಿಟ್ಟು ಹೋದ ಚಿಹ್ನೆಗಳು?
ಎಂ.ವೆಂಕಟಸ್ವಾಮಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ