ಶನಿವಾರ, ಜುಲೈ 23, 2011

ಕಾಳ ಮೇಲಿನ ಶಾಸನ

  ಚನ್ನಪ್ಪ ಅಂಗಡಿ ಬಮ್ಮನಹಳ್ಳಿ   

ಅಂಗಳದಲ್ಲಿ ಅಕಸ್ಮಾತು ಬಿದ್ದ ಜೋಳದ ಕಾಳು
ಗಿಡವಾಗಿ ಅತ್ತಿತ್ತ ತೊನೆದದ್ದು ಆಕಸ್ಮಿಕವಲ್ಲ
ಅದಕಿರುವ ತೆನೆ ತುರಾಯಿ ಯಾರ ಮುಲಾಜಿಗಲ್ಲ
ತಲೆಯ ಸುತ್ತ ತಿರುಗುವ ಪರಾಗಮೋಡ,
ಚಕ್ರ ತಿರುಗುತಿದೆ, ನಾಳೆ ಬರುವದಿದೆ ಎಂದು ಹುಯಿಲಿಟ್ಟಿತು
ಅಡಿಯಿಂದಲೇ ಕಾಳುಗಟ್ಟಿ ತಲೆಯೆತ್ತಿದ ತೆನೆ
ಕಾಲಕೆ ತನ್ನದೇ ಗತಿಯಿದೆಯಂದಿತು.
ಬಂದಷ್ಟು ಬರಲಿ ಕುಟ್ಟಿ ರೊಟ್ಟಿ ಮಾಡುವದು
ಧರ್ಮವೆಂದೆ; ಮನೆ ಮಾಲೀಕನ ಪೋಜಿನಲಿ ನಿಂದೆ
ಇದು ಆಂತರಿಕ ಸಂಗತಿ
ಅಡುಗೆಮನೆ ವಿಚಾರವೆಂದಳು ಹೆಂಡತಿ
ಹಂಚಿಳಿಸುವ ಮೊದಲು ಹಾಕಿದರೆ ಕಾಳು ಮಕ್ಕಳ ಕೈತುಂಬ ಗರಿಗರಿ ಅರಳು
ಮಗಳೇನು ಕಮ್ಮಿಯೆ?
ಅಪರೂಪಕ್ಕೊಂದರಳಿದೆ ಕಲಾಕೃತಿ
ನನ್ನ ಸ್ಕೂಲ್ ಕ್ರಾಫ್ಟಾಗಬೇಕು ವಿಶೇಷ ರೀತಿ
ಸೀತೆನೆ ಸುಟ್ಟು ತಿಂದರೆಂಥ ಮಧುರ
ಪ್ರಸ್ತಾಪಿಸಿದ ಅಸಲಿ ವಾರಸುದಾರ
ಅದೊಂದು ಭಾನುವಾರ ಎಲ್ಲವೂ ಸಸಾರ
ಅಂಗಳಕೆ ಬಂದು ಆಕಳಿಸಿದ ಸದ್ದಿಗೆ
ಪುರ‌್ರೆಂದು ಹಾರಿತೊಂದು ಗುಬ್ಬಿ
ತೆನೆಯ ಕೊನೆಯ ಕಾಳನು ಕೊಕ್ಕಲಿ ತಬ್ಬಿ
ಸೂರ ಸಂದಿಯಲಿನ ಗೂಡಿಗೆ ಹಾರಿತು
ತೆರೆದ ಬಾಯಿಗೆ ಗುಟುಕಿಕ್ಕಿ-ಎಲ್ಲವೂ ನಿಕ್ಕಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ