ಬುಧವಾರ, ಜುಲೈ 20, 2011

ಚಪ್ಪರ ಕಳಚುವ ಹೊತ್ತು

 


ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ.


ಹಸಿದ ಹೊಟ್ಟೆ
ತೆರೆದ ಬಾಯಿ
ಕಸದ ಬುಟ್ಟಿಗೆ ಗೊತ್ತು
ಇದು
ಚಪ್ಪರ ಕಳಚುವ ಹೊತ್ತು!

ಹಳಸಿದ ಅನ್ನ
ಮಾಸಿದ ಬಣ್ಣ-ಸುಣ್ಣ
ಕಟ್ಟಿದ ತೋರಣ
ಯಾರಲ್ಲಿ....ಕಸಬರಿಕೆ ತನ್ನಿ
ಅದರ ಹೊಟ್ಟೆಗೆ ಸುರಿದು ಬನ್ನಿ!

ಬೇರು ಬಿಟ್ಟರೆ ಕಂಬಗಳು
ನೆಲದಾಳಕ್ಕೆ
ಕೊಡಲಿಯಿಟ್ಟು ಮುರಿದು ಬಿಡಿ
ಸುಕ್ಕು ಬಿದ್ದ ಜರಿ ಕಾಗದಗಳ ಕಿತ್ತು
ಬಿಸಿ ನೀರು ಕಾಯಿಸುವುದಕ್ಕೆ
ಒಳಗೆ ಕೊಡಿ!

ಬಾಡಿಗೆ ತಂದ ಪ್ಲೇಟು-ಲೋಟ
ಲೆಕ್ಕ ಮಾಡಿ
ನಿಮ್ಮ ನಿಮ್ಮ ಎದೆಗಳನ್ನು ತಡವಿ
ಇನ್ನೂ ಉರಿಯುತ್ತಿದ್ದರೆ ಬಣ್ಣದ ದೀಪ
ಆರಿಸಿ ಜಾಗೃತೆ
ಬಾಡಿಗೆಯವನದು ಪಾಪ!

ನಿದ್ದೆ ಕಳಚಿ ಎದ್ದವರ ಕಣ್ಣುಗಳಲ್ಲಿ
ಪಾಳು ಬಿದ್ದ ಮನೆ
ಆಕಾಶವ ತುಂಬಿಕೊಂಡು ನಿನ್ನೆ
ನಕ್ಷತ್ರಗಳ ಗಿಲಕಿ ಆಡಿದವರು
ಇರುಳ ಕಂಬಳಿಯಂತೆ ಹೊದ್ದು
ನೆಲ ಮುಟ್ಟಿದ ಚಪ್ಪರ-
ವನ್ನೇ ನೋಡುತ್ತಾರೆ ಕದ್ದು!

ಗೋಡೆ ತುಂಬಾ...
ಹಚ್ಚಿಟ್ಟ ಮದಿರಂಗಿಯಂತೆ
ಯಾರ್ಯಾರೋ ಊರಿದ್ದ ಗುರುತು
ಇನ್ನೊಂದು ಹಬ್ಬ-ಹರಿದಿನದ
ನಿರೀಕ್ಷೆಯಲ್ಲಿ
ನೆರಳಂತೆ ಮನೆ ತುಂಬಾ ಸುಳಿಯುವವರು
ಉಳಿಯುವವರು!

ಕತ್ತಲು ಇನ್ನೂ ಹರಿದಿಲ್ಲ
ವೌನ ಮುರಿದಿಲ್ಲ
ಗಪ್ಪೆಂದರೂ ಹಕ್ಕಿ-ಪಿಕ್ಕಿಗಳ ದನಿಯಿಲ್ಲ
ಓಯ್...ಚಪ್ಪರ ಕಳಚುವುದಕ್ಕೆ
ಇನ್ನೇಕೆ ಹೊತ್ತು!?
ಮದುವೆ ಮುಗಿಯಿತು
ಮದುಮಗಳೀಗ ಮದುಮಗನ ಸೊತ್ತು!



ಪ್ರವಾದಿ















ನಾನು ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಹೊರಬಂದ ‘ಪ್ರವಾದಿಯ ಕನಸು’ ಕವನ ಸಂಕಲನದ ಒಂದು ಪುಟ್ಟ ಕವಿತೆಯನ್ನು ಇಲ್ಲಿ ನೀಡಿದ್ದೇನೆ. ಈ
ಕವಿತೆಯನ್ನು ನೀವು ಈ ಹಿಂದೆ ಓದಿರುವ ಸಾಧ್ಯತೆ ತೀರಾ ಕಡಿಮೆ.


ದೇವರ ಪಟ-

ದ ಮೇಲೆ ಗುಬ್ಬಚ್ಚಿ

ಬೆಳಕಿನ ಕಡ್ಡಿ

ಕೊಕ್ಕಲ್ಲಿ ಕಚ್ಚಿ

ನಿವೇಶ ಕೋರಿ

ಕಣ್ಣಲ್ಲಿ ಸಣ್ಣ ಅರ್ಜಿ


ಎಡವಿ ಅಮ್ಮನ
ಭಕ್ತಿ-

ಹಚ್ಚಿಟ್ಟ ಬತ್ತಿ

ದೇವರ ನೆತ್ತಿ ಮೇಲೆ ಪಾದ

ಇದಾವ ಚಾರ್ವಾಕ ವಾದ!?


ನಿಂತಲ್ಲೇ ಸೆಟೆದ

ದಿಟ್ಟ

ಪುಟ್ಟ ಸಾಮ್ರಾಟ

ಗರಿಗಳೆಡೆ ಬಚ್ಚಿಟ್ಟ

ಹತ್ಯಾರುಗಳ ಪಟಪಟ ಬಿಚ್ಚಿಟ್ಟ

ಕಟ್ಟುವುದಕ್ಕೀಗ ರೆಡಿ

ಬಹುಶಃ ಪುಟ್ಟ ಒಂದು ಗುಡಿ!


ಇರುಳು ಮುಗಿಯುವುದರಲ್ಲಿ

ಮನೆ ತುಂಬಾ

ಪ್ರೀತಿಗೆ ಭಾಷೆ

ಭಕ್ತಿಯ ಮಡಿಯುಟ್ಟು ಉಷೆ!


 

ವ್ಯಾಯಾಮ



ಅವಳು ಬಾಗಿದ  ಬಿಲ್ಲು ಗಟ್ಟಿಯಾಗಿದೆ ದಿಲ್ಲು
ಅವನೆದೆಯ ತೋಟದಲಿ ಹೊಳೆವ ಕಾಮನಬಿಲ್ಲು
ಬಿಟ್ಟ ಬಾಣದ ಚಿತ್ತ  ನೆಟ್ಟಿಹುದು ಗುರಿಯತ್ತ
ಬಾಳೆ೦ಬ ಹುತ್ತದಲಿ ಸುಖವು  ತಪ್ತ 


ತಾನು ಮೇಲೆ೦ಬುದನು ಮರೆತುಬಿಡು ಓ ಮಿತ್ರ
ಮೇಲು  ಕೀಳೆ೦ಬುದು ಬದಲಾಗುವಾ ಚಿತ್ರ
ಕುಸುಮಕೋಮಲೆ ಅವಳು ನಿನ್ನ ಸೈರಿಸುತಿಹಳು
ಒಲವ ಧಣಿ ನೀನಾಗು ನಿರತ ಹಗಲಿರುಳು


ಬದುಕೊ೦ದು ವ್ಯಾಯಾಮ ಅದಕೆಲ್ಲಿ
ಆಯಾಮ
ಬದಲಾಗುವಾ ಕಲೆಯೇ ಜಗದ ನಿಯಮ
ಸಾಗರದ ತಡಿಯದು ಮುಳುಗುಸೂರ್ಯನ ಗುಡಿ
ಈ ಆಸನಕ್ಕೊ೦ದು  ಹೆಸರ
ಕೊಟ್ಟುಬಿಡಿ

ರಂಗೋಲಿ

ರಂಗೋಲಿ

ಅಜ್ಜಿ
ಸೂರ್ಯ ಹುಟ್ಟುವ ಮೊದಲೇ
ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು
ಸರಳ ರೇಖೆಗಳ ನೇರ ನಡೆ
ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು
ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ
ಅಮ್ಮ
ಸೂರ್ಯ ಹುಟ್ಟುವಾಗ
ಅಂಗಳ ಗುಡಿಸಿ ಧೂಳು ಸಾರಿಸಿ
ರಂಗೋಲಿ ಬರೆಯುತ್ತಿದ್ದಳು
ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ
ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ
ಹಣ್ಣು ಕಾಯಿಗಳ ಮೊಳಕೆ ಬೇರುಗಳು
ಸದಾ ನೀರಿನಾಳಕ್ಕೆ
ಹುಡುಗಿ
ಸೂರ್ಯ ಹುಟ್ಟಿದ ಮೇಲೆ
ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ
ರಂಗೋಲಿ ಬರೆಯುತ್ತಾಳೆ
ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು
ಹೇಗೆ ಹೇಗೋ ಒಂದರೊಡನೊಂದು ಸೇರಿಸಿ
ಬರೆಯುತ್ತಲೇ
ಎಲ್ಲಿಂದೆಲ್ಲಿಗೋ ಬಂಧ ನಿಗೂಢ
ಸದಾ ಸಂಕೇತದಾಳಕ್ಕೆ.

ಡಾ. ಪುರುಷೋತ್ತಮ ಬಿಳಿಮಲೆ

ಏನನ್ನಿಸಿತು ನನಗೂ ಹೇಳಿ .....


ನಿಮ್ಮ ಕಲ್ಪನೆಗೆ, ಭಾವನೆಗೆ ಬಿಟ್ಟಿದ್ದು ... ಏನನ್ನಿಸಿತು ನನಗೂ ಹೇಳಿ .....

ಯಾರು ಬಿಟ್ಟು ಹೋದ ಚಿಹ್ನೆಗಳು



ಕಡಲಿಗೆ ಬಿದ್ದ ಕಣ್ಣ ನೀಲಿ
ಸಮುದ್ರವಾಯಿತೇ-
ಮಿಲಿಯಾಂತರ ಉಲ್ಕಾಪಾತಗಳ
ಕೊಲೆಯಾಗಿ ಸಮುದ್ರ ತುಂಬಿಹೋಯಿತೆ-
ನಮ್ಮೂರ ಗಿಡ ಮರ, ಕೆರೆ ಕುಂಟೆ,
ಬೆಟ್ಟ ಗುಡ್ಡ, ಭೂಮಿ ಆಕಾಶ
ಬ್ರಹ್ಮಾಂಡ-
ಕಣ್ಣ ನೀಲಿಯೊಳಗೆ ಸೇರಿಕೊಂಡಿದ್ದೇಗೇ?
ಭೂಮಿಗೆ ಬೆಂಕಿ ಬಿದ್ದಾಗೆಲ್ಲ
ಓಡಿ ಬರುವ ಕಡಲು-
ಸೂರ್ಯನಿಂದ ಬೆಳಕು ತಂದು
ಮಣ್ಣಿನಿಂದ ಕಪ್ಪು ಆಮೈನೊ ಆಸಿಡ್
ತಿಂದು ನೇಯ್ದುಕೊಂಡಿದ್ದೇಗೆ
ತನ್ನ ಸುತ್ತಲ ಜೀವಜಾಲ-
ಕೋರಲ್ ಬಣ್ಣಗಳ, ಮೀನ ಕಣ್ಣುಗಳ
ಆಕಾಶ ಕಾಯಗಳ ಗುರುತ್ವಕ್ಕೆ
ತಕಥೈ ಥೈತಕ ಕುಣಿಯುವ
ಸಮುದ್ರದ ಅಲೆಗಳ ಮೇಲೆ-
ನೀಲಿ ರಥಗಳಲ್ಲಿ ಹೋಗಿ ಬರುವವರು
ಯಾರು? ದೇವಲೋಕಕ್ಕೆ-
ಇಲ್ಲಿದ್ದವರೆಲ್ಲ ಎಲ್ಲಿಗೆ ಹೋಗವರು
ಇಲ್ಲಿಗೆ ಬಂದವರೆಲ್ಲ ಎಲ್ಲಿದ್ದವರು-
ಗಿಡ ಮರ, ಕೆರೆ ಕುಂಟೆ, ಬೆಟ್ಟ ಗುಡ್ಡ;
ಬಸ್ಸು ಕಾರು ರೈಲು ವಿಮಾನಗಳೆಲ್ಲ
ಯಾರು ಬಿಟ್ಟು ಹೋದ ಚಿಹ್ನೆಗಳು?

ಎಂ.ವೆಂಕಟಸ್ವಾಮಿ 

ಫೈಜ್ ಕವಿತೆಗಳು

ಸೆರೆಮನೆಯಲ್ಲೊಂದು ಸಂಜೆ


ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ
ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ.
ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ
ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ.
ಅಂಗಳದಲಿ ನಿಂತ ನಿರಾಶ್ರಿತ ಮರಗಳು
ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.
ಚಾವಣಿಯ ಮೇಲೆ ಮೆರುಗುತ್ತಿವೆ
ಬೆಳದಿಂಗಳ ಕರುಣೆಯ ಬೆರಳು.
ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು
ನೀಲಿ ಕದಡಿದೆ ಆಗಸದ ತುಂಬಾ.
ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು,
ಆವರಿಸಿದಂತೆ ಮನಸ
ಸ್ವಲ್ಪ ಸ್ವಲ್ಪವೇ ವಿರಹದ ನೋವು.
ಆಹಾ! ಎಷ್ಟು ಸಿಹಿ ಈ ಗಳಿಗೆ.
ಗೆಲ್ಲಲಾರದು ಇಂದು ಎಂದೆಂದೂ
ಇಲ್ಲಿ ವಿಷವ ಬೆರೆಸುವ ಮನಸು.
ಮಿಲನದ ಮನೆಯ ದೀಪ
ಆರಿಸಿಯಾರು ಬಿಡಿ.
ಚಂದ್ರನನ್ನಳಿಸುವವರು
ಯಾರಾದರೂ ಇದ್ದರೆ ಹೇಳಿ.

ಸೆರೆಮನೆಯಲ್ಲೊಂದು ಬೆಳಗು 


ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’
ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು.
‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ
ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.
ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ.
ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ  ಮೇಲೆ
ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ.
ಚಂದ್ರನ ಕೈಯ್ಯಿಂದ ಉದುರುತ್ತಿವೆ
ಒಂದೊಂದೆ ತಾರೆ ತಾವರೆಯ ಪಕಳೆಗಳು.
ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ
ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ  ಹೊತ್ತು.
ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ
ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ.
ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ
ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು.
ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು.
ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ.
ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ.
ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ.
ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು.
ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ.
ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ.
ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು.
ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ  ಇನ್ನೆಲ್ಲೋ.
ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ  ವೈರಿಗಳು.
ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು,
ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ
ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.
ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು
ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .

   Tr :    Bageshree

ಸೋಮವಾರ, ಜುಲೈ 4, 2011

ಥೊಮಸ್ ಹಾರ‍್ಡಿಯ ಕವನ.



‘ಆತ ಕೊಂದ ಮನುಷ್ಯ’
ನಾನು ಅವನು ಇಲ್ಲಲ್ಲದೆ
ಎಲ್ಲಾದರೊಂದು ಹಳೇ ಪಡಖಾನೆಯಲ್ಲಿ
ಸಿಕಿದ್ದರೆ ಇಬ್ಬರೂ ಒಂದಿಷ್ಟು ಹೆಂಡ ಕುಡಿದು
ಗಂಟಲೊಣಗಿಸಿ ಕೊಳ್ಳಬಹುದಿತ್ತು
ಕುಡಿದಿಷ್ಟು ಮತ್ತಾಗಬಹುದಿತ್ತು.
ಕಾಲ್ದಳದ ಯೋಧರಾಗಿ ನಾವು
ಒಬ್ಬರಿನ್ನೊಬ್ಬರನ್ನೆದುರಿಸಿದೆವು
ನನ್ನಂತೆಯೇ ಅವನೂ ಗುರಿ ಇಟ್ಟ
ನಾನವನ ಮುಗಿಸಿದೆ ಅವನಿದ್ದಲ್ಲೇ.
ನಾನವನ ಸಾಯಿಸಿದೆ ಯಾಕೆಂದರೆ
ಯಾಕೆಂದರೆ ಅವನೆನ್ನ ಶತ್ರು.
ನಿಜ ಅವನೆನ್ನ ಶತ್ರು ಆದರೂ
ಸೈನ್ಯ ಸೇರಲು ಅವನೂ ನನ್ನಂತೇ
ಆಗಿರಬೇಕು ನಿರುದ್ಯೋಗಿ ಅವನೂ
ಮಾರಿರಬೇಕು ತನ್ನೆಲ್ಲ ಹೊಟ್ಟೆಪಾಡಿನ
ಸಲಕರಣೆ ಕಾರಣವಿರದು ಬೇರೇನೂ
ಯುದ್ಧ ಒಂದು ವಿಪರೀತ ವಿಚಿತ್ರ
ಹೊಡೆದುರಿಳಿಸುವಿರಿ ನೀವೊಬ್ಬನನ್ನ
ಆಚೆ ಬಾರೊಂದರಲ್ಲಿ ಸಿಕ್ಕಿದರೆ ಅದೇ ಆತ
ಕೊಡಿಸಬಹುದು ಒಂದಿಷ್ಟು ಹೆಂಡ
ಕೊಡಬಹುದು ಒಂದಿಷ್ಟು ಪುಡಿಗಾಸು ಕೂಡಾ
ಕೈಫಿ ಆಜ್ಮಿ ಕವನ
‘ಮೈ ಏ ಸೋಚ್ ಕರ್...’
ನಾನು ಹೀಗಂದುಕೊಂಡು
ಆಕೆಯ ಮನೆ ಬಾಗಿಲಿಂದ ಹೊರಟೆ
ಆಕೆ ನನ್ನನ್ನ ತಡೀತಾಳೆ
ಮನವೊಲಿಸ್ತಾಳೆ ಅಂತ
ಗಾಳಿಯಲ್ಲಿ ತೇಲಿ ಬರುವ ಕೈಗಳು
ನನ್ನ ಕೈ ಹಿಡಿದು ನಿಲ್ಲಿಸುತ್ತವೆ
ನನ್ನನ್ನಾಕೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾಳೆ
ಹೆಜ್ಜೆಗಳು ಹೇಗಿದ್ದವು ಅಂದರೆ
ಆಕೆ ಈಗ ಕೂಗಿ ವಾಪಸ್ಸು
ಕರೆಯುತ್ತಾಳೆನೋ ಅಂತ
ಆದರೆ ಆಕೆ ನನ್ನ ತಡೆಯಲಿಲ್ಲ
ಮನವೊಲಿಸಲಿಲ್ಲ
ನನ್ನ ಕೈ ಹಿಡಿದು ತಡೆಯಲಿಲ್ಲ
ಹಿಡಿದು ಕೂರಿಸಲೂ ಇಲ್ಲ
ಕೂಗಿ ಕರೆಯಲೂ ಇಲ್ಲ
ನಾನು ಹಾಗೆಯೇ ನಿದಾನವಾಗಿ
ಹೆಜ್ಜೆ ಹಾಕುತ್ತಲೇ ಇದ್ದೆ
ಎಷ್ಟೆಂದರೆ
ನಾನವಳಿಂದ ದೂರವಾದೆ
ಬೇರೆಯಾದೆ...
ದೂರವಾದೆ... ಬೇರೆಯೇ ಆದೆ