ಬುಧವಾರ, ಜುಲೈ 20, 2011

ರಂಗೋಲಿ

ರಂಗೋಲಿ

ಅಜ್ಜಿ
ಸೂರ್ಯ ಹುಟ್ಟುವ ಮೊದಲೇ
ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು
ಸರಳ ರೇಖೆಗಳ ನೇರ ನಡೆ
ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು
ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ
ಅಮ್ಮ
ಸೂರ್ಯ ಹುಟ್ಟುವಾಗ
ಅಂಗಳ ಗುಡಿಸಿ ಧೂಳು ಸಾರಿಸಿ
ರಂಗೋಲಿ ಬರೆಯುತ್ತಿದ್ದಳು
ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ
ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ
ಹಣ್ಣು ಕಾಯಿಗಳ ಮೊಳಕೆ ಬೇರುಗಳು
ಸದಾ ನೀರಿನಾಳಕ್ಕೆ
ಹುಡುಗಿ
ಸೂರ್ಯ ಹುಟ್ಟಿದ ಮೇಲೆ
ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ
ರಂಗೋಲಿ ಬರೆಯುತ್ತಾಳೆ
ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು
ಹೇಗೆ ಹೇಗೋ ಒಂದರೊಡನೊಂದು ಸೇರಿಸಿ
ಬರೆಯುತ್ತಲೇ
ಎಲ್ಲಿಂದೆಲ್ಲಿಗೋ ಬಂಧ ನಿಗೂಢ
ಸದಾ ಸಂಕೇತದಾಳಕ್ಕೆ.

ಡಾ. ಪುರುಷೋತ್ತಮ ಬಿಳಿಮಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ