ಶುಕ್ರವಾರ, ಜುಲೈ 22, 2011

ಮೂರು ಕವಿತೆಗಳು

ಗೋಡೆಗಂಟಿಕೊಂಡವರೆ..




ತೂಗು ನಿಲ್ಲುವುದಿಲ್ಲ

ಅವ ಇಳಿದು, ಇವ ಏರಿ
ಅವಳು ಉಕ್ಕಿ, ಇವಳು ಹರಿದು,
ಅವನೊಳಗೆ ಇವಳು
ಇವಳೊಳಗೆ ಅವ ಹೊಕ್ಕು ಹೊರಬಂದರೂ
ತೂಗು ನಿಲ್ಲುತ್ತಲೇ ಇಲ್ಲ.

ಇಳಿಬಿದ್ದ ಕೈ-ಕಾಲು, ಕತ್ತು
ಹಿಡಿದಿಟ್ಟ ತೂಗು ಚೌಕಟ್ಟು,
ನೆಲ ಹಂಬಲ
ಬಯಕೆ ಮುಗಿಲ
ತೂಗು ನಿಲ್ಲುತ್ತಿಲ್ಲ
ಬದಲಾಗಿವೆಯಷ್ಟೇ ಕೈಗಳು.

ನಾಗೊಂದಿಬಂದಿಯ ಹಾಡು
ಜೀಕು-ಜೀಕಿಗೂ ಲಯ ಬದಲು
ಅವರವರ ದನಿಗೆ ತಾರಕ, ಮಂದ್ರ
ಮಧ್ಯ ಸಪ್ತಕವೂ,
ನಿಲ್ಲುವುದಿಲ್ಲ ತೂಗುನಾದ

ಅದು ಅಪ್ಪ, ಇದು ಅಮ್ಮ-
-ಅಮ್ಮಮ್ಮ ಅಣ್ಣ- ಅಕ್ಕ,
ಅಕ್ಕ ಪಕ್ಕ ಕಣ್ ಕಣ-ಕಣ
ಮಾತುಗಳವು ಸೂರು ಹಾರಿ,
ಬಾಗಿಲ ದೂಡಿ, ಜಿಗಿದೋಡಿ ಗೋಡೆ
ಮತ್ತಿಳಿದು ಗಿರಕಿ ಹೊಡೆವ
ಚಚ್ಚೌಕಕೆ ಅಂಟಿಕೊಳ್ಳುವ ಜೀವಗಳು
ನಿಲ್ಲುವುದಿಲ್ಲ ತೂಗು
ಕೈಗಳಷ್ಟೇ ಬದಲು.

ಹಿತ ತೂಗು, ಸಮತೂಗು,
ಜೋರು ತೂಗು, ಎತ್ತಿ ಕುಕ್ಕರಿಸಿ,
ಅಪ್ಪಳಿಸುವ, ಮುಳುಗೇಳಿಸುವ ತೂಗು,
ಮುಗ್ಗರಿಸಿ ಬಿದ್ದಾಗ ಮಮತೆ ತೂಗು,
ನೆಲ ಹಂಬಲ
ಬಯಕೆ ಮುಗಿಲ
ತೂಗು ನಿಲ್ಲುವುದಿಲ್ಲ
ಕೈಗಳಷ್ಟೇ ಬದಲು.


ಸವಿ(ಯಾಗಿ)ದೆ?



ಅಡಿಗಡಿಗೆ ಕಡೆಯುತ್ತ ಮಜ್ಜಿಗೆ
-ಪ್ರೀತಿ ಕಡೆಗೋಲೇ ಅವನಾಗಿ,
ತುಟಿಯಾಚೆಗೀಚೆ
ಆದೀತದು ಬೆಣ್ಣೆ,
ಹೋಗದಿರಲಿ ಮಾತುಗಾವಿಗೆ
ಹರಿದೆಂದು,
ಎದೆಕಾವಲಿಯೂ ತಾನಾಗಿದ್ದಾನೆ
ತುಪ್ಪವಾಗಿಸಲು.

ಹಾಲ್‌ಕೆನೆಗೆ ಹನಿ ಹೆಪ್ಪು,
ಹದಮೊಸರು ನೀಡಿದವರ
ವಿಳಾಸ ಹೇಳೆಂದರೆ,

'ಅರಳ ಬೆಣ್ಣೆ
ತುಣುಕುಗಳವು ತೇಲುತಿವೆ
ನೋಡೇ ಅಲ್ಲಿ
ಮರೆತು ಮುಳುಗ...?'

ಮೆತ್ತುತ್ತಿದ್ದಾನೆ ತುಣುಕೊಂದ
ಕರಗಲೆಂದು ಮಾತು ಒಳಗೇ.

ಯಾವ ಊರಿನ ಕುಂಬಾರಂವ?
ಎಷ್ಟು ಈ ಮಾಟುಗಡಿಗೆಗೆ?
ತಂದು ಕೊಡುವಾ ಗೆಳತಿಗೊಂದು?

'ಅಲ್ಲ ಕಣೆ ಇದು ಸಮಯ
ಹೇಳಿ, ಕೇಳಿ, ಕೊಳ್ಳಲು.
ಹಿಡಿಯೊಮ್ಮೆ ಬೊಗಸೆ,
ಇಕೋ ಈ ಬೆಣ್ಣೆಚೆಂಡು'!

ಇಟ್ಟು ಕರಗುಚೆಂಡು
ಬೆಸೆಯುತ್ತಿದ್ದಾನೆ ಬಿಚ್ಚದಂತೆ ಕೈ.

ಎಂಥ ಚೆಂದದ ಕಂಬವಿದು
ಬೆಣ್ಣೆ ಪಕಳೆಯುಂಡ
ಮೈಮಿನುಗ ನೋಡು ಅದರ!
ನಿನ್ನಮ್ಮ, ನನ್ನಮ್ಮನ
ಕೈಹಿಸುಕುಗಳೆಲ್ಲ
ಸವೆಸಿದಂತಿಲ್ಲ ಇದನ?

'ತಗೊ.. ಕಡೆಗೋಲಿಗಂಟಿದ
ಚುಕ್ಕೆಬೆಣ್ಣೆಗಳೂ ನಿನ್ನವೇ..
ಸವಿಯೇ ರಾಣಿ
ಮೆಲ್ಲಗೆ...’

'ಬೆಣ್ಣೆಯದು ಮೆದುವು
ನಿನಗಿಂತ, ನನಗಿಂತ;
ಕರಗುವ ಮೊದಲೇ ಸವಿಯೆ
ನನ್ನ ಜಾಣೇ..'

ಗಡಿಗೆಯೆಂಬ ಬ್ರಹ್ಮಾಂಡದಲಿ
ಆಡಿಸಿದಂತೆ ಆಡುವ
ಕಡೆಗೋಲು ಕಣೋ ಇದು.

ಕಡೆದಾಗೆಲ್ಲ
ಉಕ್ಕಿದೆ ನೊರೆ
ತೇಲಿದೆ ಬೆಣ್ಣೆ
ಅಮೃತಭಾಂಡವಲ್ಲವೆ?

ಸದ್ಯ
ನನ್ನಪ್ಪ-ನಿನ್ನಪ್ಪನಿಗೆ
ಸಿಗದಿದ್ದರೆ ಸಾಕಷ್ಟೆ!

-ಶ್ರೀದೇವಿ ಕಳಸದ 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ