ಸೋಮವಾರ, ಏಪ್ರಿಲ್ 18, 2011

ಕುಲವಧು

ಪ್ರತಿಭಾ ನಂದಕುಮಾರ್ ಬರೆದ ಕವಿತೆ.



ನಿಮ್ಮದು ಕುಲಾಚಾರವಾದರೆ

ನಾನು ಕುಲವಧು ಕಾಣಿರಯ್ಯ


ನೀವು ಕಾಪಾಲಿಕರಾದರೆ

ನಾನು ಕಾಲಿ


ಪಿಂಡಾಂಡಬ್ರಹ್ಮಾಂಡಗಳ ಸೃಷ್ಟಿಯಲ್ಲಿ

ನಾನು ಪ್ರಧಾನ ನೀವು ಗೌಣ

ಸಂಹಾರಕ್ರಮದಲ್ಲಿ ಅದು ವ್ಯತಿರಿಕ್ತ


ನಾವು ಯಮಳರಲ್ಲ

ವೆಂದು ಪರಿತಪಿಸಿದೆ

ತಪ್ಪು ತಪ್ಪು


ಹೂಂಕಾರದಲ್ಲಿ ಹುಟ್ಟಿದವಳು

ಉದ್ಧತ ನರ್ತನದಲ್ಲಿ ಮಗ್ನಳಾಗಿ ನಾನು

ನಗ್ನ ಮಹಾಕಾಲನ ಎದೆ ತುಳಿದವಳು


ನೀವು ತಳ್ಳಿದಿರೆಂದು

ಬೀಳುವೆನೋ ಸ್ವಾಮಿ?

-೨-

ಒಬ್ಬನೇ ಗಂಡನಿದ್ದರೆ ಪತಿವ್ರತೆ

ಇಬ್ಬರಿದ್ದರೆ ಕುಲಟೆ, ಮೂವರಿದ್ದರೆ ಧೃಷ್ಟೆ,

ನಾಲ್ವರಿದ್ದರೆ ಪುಂಶ್ಚಲೀ, ಐದು ಗಂಡರಿದ್ದರೆ ವೇಶ್ಯೆ,

ಏಳೆಂಟಿದ್ದರೆ ಪುಂಗೀ, ಅದಕ್ಕೂ ಹೆಚ್ಚಿದ್ದರೆ ಮಹಾವೇಶ್ಯೆ.

ಶೂದ್ರನ ಸಂಗ ಮಾಡಿದ ಬ್ರಾಹ್ಮಣ ಸ್ತ್ರೀ

ಹದಿನಾಲ್ಕು ದೇವೇಂದ್ರರ ಕಾಲದವರೆಗೆ

ಸಾವಿರ ಜನ್ಮಗಳ ಕಾಲ ಹೆಣ್ಣುಕಾಗೆಯಾಗಿ,

ನೂರು ಜನ್ಮ ಹೆಣ್ಣು ಹಂದಿಯಾಗಿ, ನೂರು ಜನ್ಮ ಹೆಣ್ಣು ನರಿಯಾಗಿ,

ನೂರು ಜನ್ಮ ಹೆಣ್ಣು ಕೋಳಿಯಾಗಿ, ಏಳು ಜನ್ಮ ಹೆಣ್ಣು ಪಾರಿವಾಳವಾಗಿ

ಏಳು ಜನ್ಮ ಹೆಣ್ಣು ಕಪಿಯಾಗಿ, ತದನಂತರ ಭೂಮಿಯಲ್ಲಿ ಚಂಡಾಲಿಯಾಗಿ ಹುಟ್ಟಿ

ಆಮೇಲೆ ಜಾರೆಯೂ ರೋಗಿಯೂ ಅಗಸರವಳೂ ಆಗಿ ಹುಟ್ಟಿ ನಂತರ

ಕುಷ್ಟರೋಗದಿಂದ ಬಳಲುವ ಗಾಣಗಿತ್ತಿಯಾಗಿ ಬದುಕಿ

ಸತ್ತು

ಶುದ್ಧಳಾಗುವಳು


ಅಂತೆ.

ಸತಿ ಪತಿವ್ರತೆಯ ಆ ಒಬ್ಬನೇ ಗಂಡನೇ ಮತ್ತೆ

ಕುಲಟೆ, ಧೃಷ್ಟೆ, ಪುಂಶ್ಚಲೀ, ವೇಶ್ಯೆ,

ಪುಂಗೀ, ಮಹಾವೇಶ್ಯೆಗಳ ಸಂಗ ಮಾಡುವವನು.

ಅವನು ಮುಂದಿನ ಜನ್ಮದಲ್ಲಿ ಮಂತ್ರಿಯಾಗಿ ಹುಟ್ಟುವನು.

  •  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ