ಶನಿವಾರ, ಆಗಸ್ಟ್ 13, 2011

ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಜ್ಯೋತಿ ಗುರುಪ್ರಸಾದ್

ಹದಿನಾಲ್ಕು ವರ್ಷ ಸಂಪೂರ್ಣ
ಮನದಿಚ್ಛೆಯ ನಲ್ಲನ ಜೊತೆ-ಜೊತೆಗೇ
ನಾರು ಮಡಿಯುಟ್ಟು ಹಣ್ಣು ಹಂಪಲು ಉಂಡು
ಪಕ್ಷಿ ಸಂಕುಲದ ಇಂಚರವ ಆಲಿಸಿ
ತನ್ನೆದೆಗೂಡ ಹಕ್ಕಿಗೆ ಓಗೊಟ್ಟ ಸೀತೆ
ಮಾಯೆ ತಿಳಿಯದೆ ಆ ಜಿಂಕೆಯ ಮೋಹಿಸಿಬಿಟ್ಟಳು
ಆ ಮೋಹವೂ-ಜಿಂಕೆಯ ಚೆಂದವೂ
ರಾಮನಿಗಿಂತ ಹೆಚ್ಚಾಗಿರಲಿಲ್ಲ; ಅವನಿಗಿಂತ ಹೊರತಾಗಿರಲಿಲ್ಲ
ರಾಮನೇಕೆ ಅರಿಯದೇ ಹೋದ?
ಸರಿ ಏನೇನೋ ಆಗಿ ಹೋಯಿತು.
ರಾವಣನ ಬಂಧು ಮಾರೀಚ ವಧೆಯಾಗುವುದರ ಜೊತೆಗೆ
ಮುಗ್ಧ ಮುದ್ದು ಜಟಾಯು ಪಕ್ಷಿಯೂ
ಸೀತೆಗಾಗಿ ಹೋರಾಡುತ್ತ ಪ್ರಾಣ ಒಪ್ಪಿಸಿಬಿಟ್ಟಿತು.
ಜಟಾಯು ಪಕ್ಷಿಗೆ ಶ್ರದ್ಧಾಂಜಲಿ
ಸಲ್ಲಿಸುವೋಪಾದಿಯಲ್ಲಿ ಇಂದು
ವಾಲ್ಮೀಕಿಯಾಶ್ರಮದಲ್ಲಿ ತನ್ನೆರಡು ಕಂದಗಳೊಡನೆ
ಮತ್ತದೇ ವನವಾಸದ ಜೀವನದಲ್ಲಿರುವ ಸೀತೆಗೆ ಮಾತ್ರ
ಪ್ರೇಮವೆಂದರೆ ರಾಮ ಮಾತ್ರ.
ಈ ರಾಮನೇ ಅವಳಿಗೆ ಸದಾ ಸಂಗಾತಿ
ಗುಣಗಳ ಒಡೆಯ; ಎದೆಯಾಳುವ ಅವಳ
ಭೂಪತಿ,
ಮರೆತೂ ಕೂಡ ಒಂದು ಚಿಕ್ಕ ಬಿಂದುವಿಗೂ
ಅವನ ಅಗಲಿ ಪಲ್ಲಟವಾಗುವುದಿಲ್ಲ ಈ ಬೆರೆತಿರುವ ಮನ;
ನಲ್ಲನ ಸೇರಿರುವ ಹೃದಯ
ಅವನ ಕಾಣಿಕೆ ಲವಕುಶರನ್ನು
ತನ್ನೊಳಗಿಳಿದ ರಾಮ ಸ್ವರೂಪದ
ತಂದೆತನವನ್ನೂ ನೀಡುತ್ತಾ ಕಾಪಾಡುತ್ತಿದ್ದಾಳೆ
ಒಬ್ಬಂಟಿ ತಾಯಿ ಸೀತೆ.
ವಾಲ್ಮೀಕಿಯಾಶ್ರಮದಲ್ಲಿ ಪುಣ್ಯವತಿಯಾಗಿ
ನೆಲೆ ನಿಂತ ಸೀತೆಯ ಕಣ್ಣು
ತನ್ನ ರಾಮನಿಗಾಗಿಯೇ ಹುಡುಕುತ್ತಿದೆ
ಅವಳ ನಂಬಿಕೆ ಇಷ್ಟೆ-
ಅವನ ಅಂತರರಂಗದಲ್ಲಿ ನೆಲೆ ನಿಂತಿರುವ ನಲ್ಲೆ ನಾನೇ;
ನಾನೊಬ್ಬಳೇ
ನನ್ನ ನಲ್ಲ ಅವನೇ-ಅವನೊಬ್ಬನೇ
ಈ ಸತ್ಯಕ್ಕೆ ಶರಣಾಗಿ ರಾಮ ಮತ್ತೆ ಬಂದೇ ಬರುವನು.
ಕರುಳಕರೆಗೆ ಓಗೊಡದ ರಾಮ ಈ ಭೂಮಿಯ ಮೇಲೆ
ಇರಲು ಸಾಧ್ಯವೇ ಇಲ್ಲ.
ಮತ್ತೆ ನಾ ನೋಡುವ ರಾಮ
ನನ್ನದೇ ಕಂದಗಳ ತಂದೆ ರಾಮ-ಸತ್ಯವ್ರತ ರಾಮ
ಮಾಡಿದ ತಪ್ಪು ತಿದ್ದಿಕೊಂಡು
ವಿಸ್ಮೃತಿಯಿಂದ ಸ್ಮೃತಿಯೆಡೆಗೆ ನಡೆಯುವ ರಾಮ
ನನ್ನ ನಲ್ಲ ರಾಮ. ಅವನು ಮಾತ್ರ ರಾಮ.
--ಜ್ಯೋತಿ ಗುರುಪ್ರಸಾದ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ