ಮೂಲ ಪಂಜಾಬಿ;
ಇಂಗ್ಲೀಷಿಗೆ: ನಿರುಪಮಾ ದತ್ತ
ಕನ್ನಡಕ್ಕೆ: ಉದಯ್ ಇಟಗಿ
(ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.)
-
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ
ಎಲ್ಲಿ ಮತ್ತು ಹೇಗೆ? – ನನಗೆ ಗೊತ್ತಿಲ್ಲ.
ಬಹುಶಃ, ನಾನು ನೀನು ಬಿಡಿಸುವ ಚಿತ್ರಕ್ಕೆ
ಕಲ್ಪನೆಯ ವಸ್ತುವಾಗಬಹುದು.
ಅಥವಾ ನಿನ್ನ ಕ್ಯಾನ್‍ವಾಸ್ ಮೇಲೆ
ನೀನೆ ಬಿಡಿಸಿಟ್ಟ ನಿಗೂಢ ಗೆರೆಗಳೆಲ್ಲೆಲ್ಲೋ ಅಡಗಿಕೊಂಡು
ನಿಧಾನವಾಗಿ ಕ್ಯಾನ್‍ವಾಸ್ ತುಂಬಾ ಹರಡಿಕೊಂಡು
ನಿನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಳ್ಳಬಹುದು.
ಪ್ರಾಯಶಃ, ನಾನೊಂದು ಸೂರ್ಯ ರಶ್ಮಿಯಾಗಿ
ನಿನ್ನ ಬಣ್ಣಗಳ ಆಲಿಂಗನದಲ್ಲಿ ಕಳೆದುಹೋಗಬಹುದು.
ಇಲ್ಲವೇ ನಿನ್ನ ಕ್ಯಾನ್‍ವಾಸ್ ಮೇಲೆ
ನಾನೇ ಬಣ್ಣ ಬಳಿದುಕೊಂಡು
ಒಂದು ಚಿತ್ರವಾಗಿ ಮೂಡಬಹುದು.
ಒಟ್ಟಿನಲ್ಲಿ ಖಂಡಿತ ನಿನ್ನ ಸಂಧಿಸುತ್ತೇನೆ
ಆದರೆ ಹೇಗೆ ಮತ್ತು ಎಲ್ಲಿ? – ನನಗೆ ಗೊತ್ತಿಲ್ಲ.
ಬಹುಶಃ, ನಾನೊಂದು ನೀರಿನ ಬುಗ್ಗೆಯಾಗಬಹುದು.
ಬುಗ್ಗೆಯಾಗಿ ಅದರಿಂದ ಉಕ್ಕುವ
ನೊರೆನೊರೆ ನೀರಿನ ಹನಿಗಳನ್ನು
ನಿನ್ನ ಎದೆಯ ಮೇಲೆ ಚಿಮುಕಿಸಿ ಉಜ್ಜುತ್ತೇನೆ.
ಉಜ್ಜುತ್ತಾ ಉಜ್ಜುತ್ತಾ ನಿನ್ನನ್ನು ನನ್ನೆದೆಗೆ ಒತ್ತಿಕೊಂಡು ಮುತ್ತಿಡುತ್ತೇನೆ
ನನಗೆ ಇದು ಬಿಟ್ಟರೆ ಬೇರೇನೂ ಗೊತ್ತಿಲ್ಲ
ಏನಾದರಾಗಲಿ, ನಾನು ನಿನ್ನೊಂದಿಗಿರುತ್ತೇನೆ.
ಈ ದೇಹ ಹೋದರೆ
ಎಲ್ಲವೂ ಹೋದಂತೆ.
ಆದರೆ ಅದರೊಂದಿಗೆ ಹೆಣೆದುಕೊಂಡ
ನೆನಪಿನ ದಾರದುಂಡೆಗಳು
ಮತ್ತೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳತೊಡಗುತ್ತವೆ.
ನಾನು ಆ ಎಳೆಗಳನ್ನೆ ಹಿಡಿದುಕೊಂಡು
ಮತ್ತೆ ದಾರದುಂಡೆಗಳನ್ನಾಗಿ ಸುತ್ತುತ್ತೇನೆ.
ಸುತ್ತುತ್ತಾ ಸುತ್ತುತ್ತಾ ಅಲ್ಲಿ ನಿನ್ನ ಕಾಣುತ್ತೇನೆ.
ಆ ಮೂಲಕ ಮತ್ತೆ ನಿನ್ನನ್ನು ಬಂದು ಸೆರುತ್ತೇನೆ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ