ಒಂಟಿತನ
ಅವಳೀಗ ಬೆಳಕಿಗೆ ಮುಖ-
ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ.
ಬೆಳಕೆಂದರೆ ಅವಳಿಗೆ ಭಯ
ಸಾಕೆನಿಸಿದೆ ಅವಳಿಗೆ ಬೆಳಕಿನ
ಸದ್ದು ಸಂಭ್ರಮ ಹೊಸಹುಟ್ಟು
ಅವಳ ಪಾಡು ಅವಳಿಗೆ.
ಯಾರಿಗೂ ಬೇಕಿಲ್ಲದ
ನಡುಪ್ರಾಯದ ಅವಳಿಗೆ
ನಡುಕ, ಕದ್ದುಮುಚ್ಚಿ ಬೆಳಕು
ಒಳಗೆ ಬರಬಹುದೆಂದು. ಅದಕ್ಕೆ
ಅವಳೀಗ ಕಿಟಕಿ ಬಾಗಿಲು
ಮುಚ್ಚಿಟ್ಟಿರುತ್ತಾಳೆ. ರಾತ್ರಿಯ
ಮಾತು ಬೇರೆ. ದೂರದ ನಕ್ಷತ್ರ
ಕಟ್ಟುವುದು ಕಷ್ಟ ಸಂಬಂಧ.
ಕತ್ತಲ ಜೊತೆ ಮಾತಿಲ್ಲದ
ಸಂವಾದ ನಡೆಸುತ್ತಾಳೆ. ಕತ್ತಲು
ಅವ್ವನಂತೆ, ತಣ್ಣನೆಯ ಪ್ರೀತಿ.
ತೊಡೆ ಮೇಲೆ ತಲೆ ಇಟ್ಟು,
ಮಲಗುತ್ತಾಳೆ. ಒಂಟಿತನದ
ಕಣ್ಣೀರು, ನಸಕು ಹರಿಯುವ
ತುಸು ಮುಂಚೆ, ಮುಗ್ಢತೆ
ಪರಿಶುದ್ಧತೆಯ ಪಾರಿಜಾತ-
ದ ಹೂವಾಗಿ ಚೆಲ್ಲಿದೆ ಗಿಡ-
ದಡಿಯಲ್ಲಿ ಘಮ ಘಮಿಸುವ
ಪರಿಮಳ.
ಯಾರಿಗೂ ಸೇರದೆ
ಎಲ್ಲವೂ ತನ್ನೊಳಗಿದ್ದಂತೆ
ಯಾರಿಗೂ ಸೇರದೆ
ಎಲ್ಲವೂ ತನ್ನೊಳಗಿದ್ದಂತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ