- ಹೂವಕಟ್ಟುವ ಕಾಯಕ
- ವೈದೇಹಿ
- ಅಬ್ಬಲಿಗೆ ಹಗುರಕ್ಕೆ ಸೇವಂತಿ ಜೊತೆ ಬೇಡ
ಭಾರ ಜಗ್ಗಿ ಮಾಲೆ ತೂಕ ತಪ್ಪುತ್ತೆ
ಆಚೆಗಿಡು ಅವುಗಳನು ಬೇರೆ ಕಟ್ಟು
ಹೂವಾದರೇನು, ಒಂದನೊಂದು ಮರೆಸದ ಹಾಗೆ
ಆಯಬೇಕು ನೋಡು ಮೊತ್ತ ಮೊದಲು
ಮಲ್ಲಿಗೆಯ ಜೊತೆಗೆ ಮಲ್ಲಿಗೆಯೆ ಸಮ ಕಣೆ
ಇದ್ದರಿರಲಿ ಎರಡು ಪಚ್ಚೆಕದಿರು
ದುಂಡುಮಲ್ಲಿಗೆ ಮರುಗ ಎಂದಿನಿಂದಲೂ ಒಂದು
ಹೊಂದುವುದು ಜಾಜಿಯೂ ತಂಗಿಯಂತೆ
ಕಾಕಡಾ ಮತ್ತು ಪಂಚಪತ್ರೆಯ ಜೋಡಿ
ಮಾಲೆಯನು ಬಲುಬೇಗ ಉದ್ದ ಮಾಡಿ
ಸ್ವಲ್ಪ ಹೂವಲೆ ದೊಡ್ಡ ಹಾರ ಕಟ್ಟಿದ ಲಾಭ
ನೀಡುವುದು ಕಂಡೆಯ, ಸುಲಭದಲ್ಲಿ!
ದಾಸವಾಳವೆ? ಇರಲಿ ಬಿಡಿಬಿಡೀ ಅದರಷ್ಟಕ್ಕೆ
ಅರಳಿದರೆ ಬೇಕದಕೆ ಅಂಗೈಯಗಲ ಜಾಗ
ಗುಲಾಬಿಗೋ ಕಟ್ಟಿದರೂ ಬಿಟ್ಟರೂ ಖೇರಿಲ್ಲ
ಎಷ್ಟಂತಿ ಹಮ್ಮು, ಪಾಪ, ಮುಳ್ಳಿದ್ದರೂ!
ಬಣ್ಣ ಬಣ್ಣದ ರತ್ನಗಂಧಿಯನು ಕೊಯ್ದು
ತೊಟ್ಟುಗಳ ಹೆಣೆಯೋಣ ಕಡಿಯದಂತೆ
ಸಂಜೆಮಲ್ಲಿಗೆ ವಿವಿಧ ಜುಟ್ಟುಜುಟ್ಟಿಗೆ ಗಂಟು
ಕಸ್ತೂರಿತೆನೆಯ ಜೊತೆ ಕೇಪಳದ ಕೆಂಪು
ಹಗ್ಗ ಹಂಗಿಲ್ಲದೆಯೆ ಹೆಣೆವ ಕ್ರಮವಿದೆ ಎಷ್ಟು
ದಾರದಾಧಾರದಲೆ ಪೋಣಿಸುವವೆಷ್ಟು !
ಕಟ್ಟಿದರೆ ಶಂಖಪುಷ್ಪ ನಿತ್ಯಪುಷ್ಪದಂಥವು
ನಲುಗುವವು ಹಾn ಹೂ ಬುಟ್ಟಿಯಲ್ಲಿಡು, ಸ್ವಸ್ಥ
ಇರಲಲ್ಲಿ ಅವು ಕಟ್ಟಿ ಅವುಗಳೊಳಗೇ ನಂಟು
ನಮ್ಮದೇ ಮಾತು ಆಲಿಸುತ ನೋಡಿಲ್ಲಿ
ಹೊತ್ತು ಹೋದದ್ದೇ ತಿಳಿಸದೆ
ಕೈಯೊಳಗೆ ಕೈಯಿಟ್ಟು ಸಜಾjಗಿ ಶಿಸ್ತಾಗಿ
ಮಾರುದ್ದ ಮಾಲೆಯಲಿ ಈ ಹೂಗಳು
ಮೂರೆಳೆ ನಾಕೆಳೆ ಎರಡೆಳೆ ಒಂದೆಳೆ
ದಾರ ಉದಾರ ಶೂನ್ಯಾಧಾರ ಸೂತ್ರದಲಿ
ಯಾವ ಉದ್ದೇಶಕ್ಕೋ ಹೊರಟು ನಿಂತಿಹವು
ಕಟ್ಟಿದ್ದು ನಾವು ಹೂವ ಮಾತ್ರವೆ ಏನು?
ಕಲಿಸಿಲ್ಲವೆ ಅದು ಕಟ್ಟುವ ಪಾಠವನ್ನು
ನಿತ್ಯವೂ ಹೊಸ ಹೂವು ನಿತ್ಯ ಹೊಸ ಕ್ಷಣದಂತೆ
ನಿತ್ಯವೂ ಹೊಸ ಪಾಠ ಪುಟ ತೆರೆಯುವಂತೆ
ಹೂ ಪತ್ರೆ ರಾಶಿಯಿದೆ ಕಟ್ಟೋಣ ಬಾ ಸಖೀ
ಕರೆ ಅವಳನು ಅವನನೂ ಎಳೆಯರನೂ ಬೆಳೆಯರನೂ
ಕಲಿಯೋಣ ಎಲ್ಲರೂ ಹೂವ ಕಟ್ಟುವುದನು
ಕಟ್ಟುವ ಬಗೆ ಬಗೆಯ ಕಲೆ ಕಲಿಯೋಣ ಬಾ
ಕಟ್ಟಿ ಮನದೇವರಿಗೆ ಸಲಿಸೋಣ ಬಾ
ಶನಿವಾರ, ಆಗಸ್ಟ್ 13, 2011
ಹೂವಕಟ್ಟುವ ಕಾಯಕ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ