ಬುಧವಾರ, ಆಗಸ್ಟ್ 3, 2011

ರಮಝಾನ್ ಪದ್ಯಗಳು.


ಬಿ .ಎಂ . ಬಷೀರ್


ಇಂದಿನಿಂದ ರಮಝಾನ್. ಇನ್ನು ಒಂದು ತಿಂಗಳು ನನಗೆ ಉಪವಾಸ. ಯಾಕೋ ತಾಯಿಯ ನೆನಪಾಗುತ್ತಾ ಇದೆ. ಅತ್ತಾಳದ ರಾತ್ರಿ(ರಾತ್ರಿ ಸುಮಾರು 4 ಗಂಟೆಗೆ ಎದ್ದು ಉಣ್ಣುವುದನ್ನು ಅತ್ತಾಳ ಎಂದು ಕರೆಯುತ್ತಾರೆ. ಹಾಗೆ ಉಂಡು, ನಮಾಝ್ ಮಾಡಿ ಮಲಗಿದರೆ, ಬಳಿಕ ಮರುದಿನ ರಾತ್ರಿ 7 ಗಂಟೆಯವರೆಗೆ ಹನಿ ನೀರೂ ಕುಡಿಯುವಂತಿಲ್ಲ) ತಾಯಿ ಎದ್ದು ನಮ್ಮನ್ನೆಲ್ಲ ‘ಏಳಿ ಮಕ್ಕಳೇ ಏಳಿ...’ ಎಂದು ಎಬ್ಬಿಸುತ್ತಿದ್ದಳು. ನಾವೋ ಸೋಂಭೇರಿಗಳು. ‘ಏಳಿ ಮಕ್ಕಳೇ...’ ಎಂದು ಕೂಗಿ ಕೂಗಿ ತಾಯಿಯ ಗಂಟಲ ಪಸೆ ಆರಿದ ಬಳಿಕ, ಮೆಲ್ಲಗೆ ಎದ್ದು ಕೂರುತ್ತಿದ್ದೆವು. ನಿದ್ದೆಗಣ್ಣಲ್ಲೇ ಅತ್ತಾಳ ಉಂಡು, ನಿದ್ದೆಗಣ್ಣಲ್ಲೇ ನೋಂಬಿನ ನಿಯತ್ತು ಹೇಳಿ, ಮಲಗಿ ಬಿಡುತ್ತಿದ್ದೆವು. ಈಗ ನಮ್ಮನ್ನು ಎಬ್ಬಿಸುವ ತಾಯಿಯ ದನಿಯೇ ಇಲ್ಲ. ಮೊಬೈಲ್ ಅಲಾರಾಂಗೆ ಎದ್ದು, ತಂಗಿ ಮಾಡಿಟ್ಟ ಅನ್ನ ಉಂಡು, ತಾಯಿಯನ್ನು, ದೇವರನ್ನು ನೆನೆದು ಮಲಗಬೇಕು.
ಬಾಲ್ಯದಲ್ಲಿ ನನ್ನ ಮದರಸದ ಗುರುಗಳು ಹೇಳಿದ್ದು ಈಗಲೂ ನನಗೆ ನೆನಪಿದೆ ‘‘ರಮಝಾನ್ ತಿಂಗಳಲ್ಲಿ ತಿನ್ನುವುದಕ್ಕೆ ಏನೂ ಸಿಗದೇ ಇದ್ದರೆ ಕೆಲವೊಮ್ಮೆ ನಾಯಿಯೂ ಹಸಿದಿರುತ್ತದೆ. ಹಾಗೆಂದು ಅದು ರಮಝಾನ್ ವ್ರತ ಹಿಡಿದಿದೆ ಎಂದು ಹೇಳುವುದಕ್ಕಾಗುತ್ತದೆಯೆ? ರಮಝಾನ್‌ನ ಉಪವಾಸ ನಮ್ಮನ್ನು ಒಳ್ಳೆಯ ಮನುಷ್ಯರಾಗಿ ತಿದ್ದುವುದಕ್ಕೆ ಸಹಾಯವಾಗಬೇಕು. ತಪ್ಪಿ ನೀರು ಕುಡಿದರೆ ನಿಮ್ಮ ಉಪವಾಸಕ್ಕೆ ತೊಂದರೆಯಾಗುವುದಿಲ್ಲ. ಆದರೆ ಇನ್ನೊಬ್ಬರನ್ನು ನೋಯಿಸಿದರೆ, ಕೆಟ್ಟದ್ದನ್ನು ಮಾಡಿದರೆ, ಇನ್ನೊಬ್ಬರಿಗೆ ಬೈದರೆ ಉಪವಾಸ ಮುರಿಯುತ್ತದೆ. ಕೆಟ್ಟದನ್ನು ಮಾಡುತ್ತಾ, ಯೋಚಿಸುತ್ತಾ ನೀವು ಹಸಿದು ಕುಳಿತುಕೊಳ್ಳುವುದು ಸುಮ್ಮನೆ. ರಮಝಾನ್‌ನಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ನೆರವು ನೀಡಿ. ಕೆಟ್ಟದ್ದನ್ನು ತಡೆಯಿರಿ. ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲಿ. ರಮಾಝಾನ್‌ನ ಹಸಿವು ನಿಮ್ಮ ವ್ಯಕ್ತಿತ್ವವನ್ನು ಬದಲಿಸಿ, ನಿಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸಬೇಕು. ರಮಝಾನ್‌ನಲ್ಲಿ ಸುಮ್ಮನೆ ಹಸಿದು ಕೂರುವುದಕ್ಕೆ ಯಾವ ಅರ್ಥವೂ ಇಲ್ಲ....’’
ಫಕೀರ್ ಮಹಮ್ಮದ್ ಕಟ್ಪಾಡಿಯ ‘ನೋಂಬು’ ಕತೆ ನೆನಪಾಗುತ್ತದೆ. ನಾನು ಓದಿದ ಅತಿ ಒಳ್ಳೆಯ ಕತೆಗಳಲ್ಲಿ ಇದೂ ಒಂದು. ಬಡವರ ಮನೆಯ ಸಣ್ಣ ಹುಡುಗನೊಬ್ಬ ತಂದೆ ತಾಯಿಗಳೊಂದಿಗೆ ಹಟ ಹಿಡಿದು ನೋಂಬು ಹಿಡಿಯುತ್ತಾನೆ. ಸಂಜೆಯ ಹೊತ್ತಿಗೆ ನೋಂಬು ಬಿಟ್ಟ ಬಳಿಕ ತಾಯಿಯೊಂದಿಗೆ ಅಚ್ಚರಿಯಿಂದ ಕೇಳುತ್ತಾನೆ ‘‘ಅರೆ, ನೋಂಬು ಎಂದರೆ ಇಷ್ಟೇಯಾ? ಇದನ್ನು ನಾವು ಆಗಾಗಾ ಹಿಡಿಯುತ್ತಾ ಇರುತ್ತೇವಲ್ಲ...’’ ಹಸಿದು ಕೂರುವುದೇ ನೋಂಬು ಎಂದಾದರೆ ಬಡವರಿಗೆ ವರ್ಷವಿಡೀ ರಮಝಾನ್ ಅಲ್ಲವೆ? ಬಡವರ ಹಸಿವನ್ನು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ರಮಝಾನ್ ನನಗೊಂದು ಅವಕಾಶ ಎಂದು ಭಾವಿಸಿದ್ದೇನೆ. ಅವರು ಪ್ರತಿ ದಿನ ಉಣ್ಣುತ್ತಿರುವ ಹಸಿವಿನ ಒಂದು ತುತ್ತನ್ನು ರಮಝಾನ್ ತಿಂಗಳಲ್ಲಿ ಉಣ್ಣ ಬೇಕು ಎಂದು ತೀರ್ಮಾನಿಸಿದ್ದೇನೆ. ಈ ಬಾರಿಯಾದರೂ ರಮಝಾನ್ ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿಸುತ್ತದೆ ಎಂಬ ನಿರೀಕ್ಷೆಯಲ್ಲಿ, ರಮಝಾನ್ ತಿಂಗಳನ್ನು ಸ್ವಾಗತಿಸಿದ್ದೇನೆ. ನಿಮಗೆಲ್ಲರಿಗೂ ರಮಝಾನ್ ಶುಭಾಶಯಗಳು.
ಕಳೆದ ರಮಝಾನ್ ಹಬ್ಬದ ಸಂದರ್ಭದಲ್ಲಿ ಬರೆದ ಪದ್ಯವೊಂದನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ರಮಝಾನ್ ಪದ್ಯಗಳು

ನಾನು ತುಕ್ಕು ಹಿಡಿದ ಕಬ್ಬಿಣ
ಹಸಿವಿನ ಕುಲುಮೆಯಲ್ಲಿ
ಧಗಿಸಿ ಹೊರ ಬಂದಿದ್ದೇನೆ
ಈಗಷ್ಟೇ ಸ್ನಾನ ಮುಗಿಸಿದ
ನವಜಾತ ಶಿಶುವಿನಂತೆ
ಬೆಳಗುತ್ತಿದ್ದೇನೆ

ಮೇಲೊಬ್ಬ ಕಮ್ಮಾರ
ಬಾಗಿದ್ದೇನೆ ಅವನ ಮುಂದೆ
ಉಳುವವನಿಗೆ ನೊಗವೋ
ಮನೆಗೊಂದು ಕಿಟಕಿಯೋ
ಬಾಗಿಲಿಗೆ ಚಿಲಕವೋ, ಬೀಗವೋ
ಅಥವಾ ಧರಿಸುವುದಕ್ಕೆ ಖಡ್ಗವೋ

ಎಲ್ಲಾ ಅವನ ಲೆಕ್ಕಾಚಾರ

2
ನಡು ರಾತ್ರಿ
ಅತ್ತಾಳಕ್ಕೆಂದು ಮಗನ
ಎಬ್ಬಿಸ ಬಂದ ತಾಯಿ
ತಲ್ಲಣಿಸಿ ನಿಂತಿದ್ದಾಳೆ

ಮಗುವಿನ ಗಾಢ ನಿದ್ದೆ
ಅವಳಿಗೆ ಧ್ಯಾನದಂತೆ ಭಾಸವಾಗಿದೆ

3
ರಮಝಾನ್ ದಿನಗಳು
ಅಮ್ಮನ ಕೆನ್ನೆಯ ಓಣಿಗಳಲ್ಲಿ
ಕಣ್ಣ ಹನಿಗಳಾಗಿ
ಉದುರಿ ಹೋಗುತ್ತಿವೆ
ಒಬ್ಬಂಟಿ ಕುಳಿತು

ಜಪಮಣಿಯಂತೆ ಅವಳದನ್ನು ಎಣಿಸುವಳು

4
ನನ್ನ ದ್ವೇಷ
ಹಸಿವಿನ ಬೆಂಕಿಯಲ್ಲಿ ಬೂದಿಯಾಗಿದೆ
ಏನು ಹೇಳಲಿ ಕರುಣಾಳುವಿನ ಕೃಪೆಯ?
ಮಸೀದಿಯಲ್ಲಿ ಕ್ಷಮೆಯ
ಉಡುಗೊರೆಯೊಂದಿಗೆ
ಕಾಯುತ್ತಿದ್ದಾನೆ ಗೆಳೆಯ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ