ಶನಿವಾರ, ಆಗಸ್ಟ್ 20, 2011

ಬರುವಿರಾ, ಹಳೆಯ ಹೆಜ್ಜೆಗಳು ಕರೆದಾಗ...



ಬಿಟ್ಟು ಹೋದ ಹೆಜ್ಜೆಗಳನು ಮತ್ತೆ ಹೆಕ್ಕಲು ಬಂದಾಗ

ಬಿತ್ತಿದ ಬೀಜ ಮರವಾಗಿತ್ತು 
ಮರದ ನೆರಳಲಿ ಹೆಜ್ಜೆಗಳು ಮರೆಯಾಗಿ
ಕಲ್ಲಿನ ಶಿಖರವಾಗಿತ್ತು

ಎಲ್ಲೆಲ್ಲೋ ಅಲೆದು ಏನೇನೋ ಅಳೆದು
ಮುಷ್ಟಿಯೊಳಗಿನ ಮುತ್ತನು ಹಿಡಿದುಕೊಂಡು
ಬಿಟ್ಟು ಹೋದ ಹೆಜ್ಜೆಗಳ ಕಾಲುಗಳಿಗೆ 
ಗೆಜ್ಜೆ ಕಟ್ಟಿ ಕುಣಿಯಲೆಂದು ಬಂದರೆ

ಅಲ್ಲಿ ಪಾರ್ತಿಸುಬ್ಬನ ಪದ್ಯಗಳನು
ಯೂ ಟ್ಯೂಬ್ ನೊಳಗಿಟ್ಟ 
ಭಾಗವತರ ಬೋಳು ಮಂಡೆಗೆ ಮುಂಡಾಸು ಏರಿದೆ
ಕತ್ರಿನಾಳ ಶೀಲಾ ಕಿ ಜವಾನಿಯ ನೆನಪಲ್ಲಿ

ಇನ್ನೊಮ್ಮೆ ಸಿಗುವೆ ಎಂದು ವಾಗ್ದಾನ ನೀಡಿದ
ಮಾವಿನ ಮರದ ಕರುಳ ನೆರಳು 
ಬಟಾ ಬಯಲಾಗಿದೆ ಅಂತಸ್ತುಗಳನು ಲೆಕ್ಕ ಹಾಕುತ್ತಾ
ಬಾನೆತ್ತರ ಎದ್ದು ನಿಂತ ಮಹಾ ಮಹಡಿಗಳೊಳಗೆ

ಮುದ್ದುಕಂಗಳ ಮುಗ್ದೆಯ ತುಟಿಯಂಚಿನ ಸಣ್ಣ
ಸ್ಪರ್ಶಕೆ ಮರೆತು ಹೋದ ತರಗತಿಯ ಪಾಠಗಳು
ವಾರನ್ ಬಫೆಟ್‍ನ ಉಪನ್ಯಾಸದ ಸೀ.ಡಿ.ಗಳಲಿ
ಷೇರು ಮಾರುಕಟ್ಟೆಯ ವ್ಯವಹಾರದ ಪಂಚಾಂಗವನು ಹಾಕಿದೆ


ಜಾರಿ ಬಿದ್ದು ಗುರುತಿಗೊಂದು ಶಾಶ್ವತ ಕಳೆಯನು 
ಕೊಟ್ಟ ಬಯಲ ಕಲ್ಲು
ಕರಗಿ ಹೋಗಿದೆಯೋ, ಉರುಳಿ ಹೋಗಿದೆಯೋ
ಅಲ್ಲ ಅಂಚಿನೊಳಗಿನ ಮಸಣದ ಗೋರಿಗೆ ಆಸರೆಯಾಗಿದೆಯೋ


ಮತ್ತೆ ಹೆಕ್ಕಲು ಬಂದಾಗ ಆ ಹಳೆಯ  ಹೆಜ್ಜೆಗಳೇನಾದರೂ
ಕರಿಬೂಟಿಗೆ ತಗುಲಿ ಅಪ್ಪಾ ಎಂದು ಕರೆದರೆ
ಹೆಗಲ ಮೇಲಿನ ಚೀಲದೊಳಗೆ ತುಂಬಲು, ಗೆಳೆಯರೇ
ನೀವ್ಯಾರಾದರೂ ಹೊರಟು ಬರುವಿರಾ 

ಅಂತಸ್ತಿನ ಕಟ್ಟಡದ ಮೂವತ್ತನೇ ಮಹಡಿಯಿಂದ
ಸುಂದರ ಸಂಜೆಯನೂ ನುಂಗಿದ ಮಧ್ಯಾಹ್ನದ ಮೀಟಿಂಗ್‍ನಿಂದ
ಒಂದೊಂದಿಂಚೂ ಮುಂದುವರಿಯದ ಮಾರ್ಗದೊಳಗಿನ ದಟ್ಟಣೆಯಿಂದ
ಸ್ಥಿತಿಯನು ವಿಸ್ತರಿಸುವ ಫೇಸ್‍ಬುಕ್ಕಿನ ಸ್ಟೇಟಸ್‍ನಿಂದ.

ಬಾನಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ